ಬೆಂಗಳೂರು, ನ.29 www.bengaluruwire.com : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆದ ಬಣ ವಿವಾದವು ಸದ್ಯ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜೋಡಿ ಇಂದು ಒಟ್ಟಿಗೆ ಬೆಳಗಿನ ಉಪಹಾರ ಕೈಗೊಂಡು, ತಮ್ಮ ನಡುವಿನ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ನಮ್ಮ ನಡುವೆ ಇನ್ನು ಮುಂದೆ ಯಾವುದೇ ಗೊಂದಲ ಇರುವುದಿಲ್ಲ, ಇದೇ ರೀತಿ ಸರ್ಕಾರವನ್ನು ಮುಂದುವರಿಯಲಿದ್ದೇವೆ. ಹೈಕಮಾಂಡ್ ಸೂಚನೆಯಂತೆಯೇ ನಡೆದುಕೊಳ್ಳಲಿದ್ದೇವೆ ಎಂದು ಇಬ್ಬರೂ ನಾಯಕರು ಜಂಟಿ ಹೇಳಿಕೆ ನೀಡಿದ್ದಾರೆ.
ಸಿಎಂ ʼಕಾವೇರಿʼ ನಿವಾಸಕ್ಕೆ ಶನಿವಾರ ಬೆಳಗ್ಗೆ ಆಗಮಿಸಿದ ಡಿಕೆ ಶಿವಕುಮಾರ್ ಅವರನ್ನು ಸ್ವತಃ ಸಿಎಂ ಸಿದ್ದರಾಮಯ್ಯ ನಗುಮೊಗದಿಂದ ಸ್ವಾಗತಿಸಿದರು. ಬೆಳಗಿನ ಉಪಹಾರದ ಬಳಿಕ ಇಬ್ಬರೂ ನಗುಮೊಗದಿಂದಲೇ ಹೊರಗೆ ಬಂದು ಜಂಟಿಯಾಗಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಇತ್ತೀಚೆಗೆ ಸುಮಾರು ಒಂದು ತಿಂಗಳಿನಿಂದ ಅನಗತ್ಯವಾಗಿ ಕಾಂಗ್ರೆಸ್ನಲ್ಲಿ ಕೆಲವು ಬಿಕ್ಕಟ್ಟು ನಿರ್ಮಾಣವಾಗಿತ್ತು. ಈ ಕಾರಣಕ್ಕೆ ಪಕ್ಷದ ಹೈಕಮಾಂಡ್ ಸೂಚನೆಯಂತೆ ನಾನು ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಉಪಹಾರದ ಜೊತೆಗೆ ಚರ್ಚೆ ನಡೆಸಿದ್ದೇವೆ. ನಮ್ಮಿಬ್ಬರ ನಡುವೆ ಯಾವುದೇ ಗೊಂದಲಗಳಿಲ್ಲ. ಇವತ್ತಿನ ತನಕ ನಮ್ಮ ಮಧ್ಯೆ ಯಾವುದೇ ಗೊಂದಲಗಳಿರಲಿಲ್ಲ. ಮುಂದೆಯೂ ಇದೇ ರೀತಿಯಲ್ಲಿ ಮುಂದುವರಿಯಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

“ಇಂದು ನಾನು ಹಾಗೂ ಸಿಎಂ ಅವರು ಉಪಹಾರ ಕೂಟದಲ್ಲಿ ಭಾಗವಹಿಸಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಸಿದ್ದರಾಮಯ್ಯ ಅವರು ನಮ್ಮ ಮನೆಗೆ ಭೋಜನಕೂಟಕ್ಕೆ ಬರಲಿದ್ದಾರೆ. ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಕಾರ್ಯಕರ್ತರ ಪರಿಶ್ರಮ, ಜನರ ಆಶೀರ್ವಾದ, ನಿಮ್ಮೆಲ್ಲರ ಸಹಕಾರದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಾವು ಕೊಟ್ಟ ಮಾತಿನಂತೆ ಜನರ ಸೇವೆ ಮಾಡುತ್ತಿದ್ದೇವೆ. ರಾಜ್ಯದ ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ಸಹಕಾರ ನೀಡುತ್ತಿದ್ದಾರೆ. ಜನರ ನಿರೀಕ್ಷೆ, ಆಕಾಂಕ್ಷೆ, ಆಶೋತ್ತರಗಳನ್ನು ಈಡೇರಿಸುವುದು ನಮ್ಮ ಕರ್ತವ್ಯ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದ್ದು, ಹೈಕಮಾಂಡ್ ತೀರ್ಮಾನದಂತೆ ಕೆಲಸ ಮಾಡುತ್ತಿದ್ದೇವೆ” ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ನಮ್ಮಲ್ಲಿ ಯಾವುದೇ ಗುಂಪಿಲ್ಲ, ಇಡೀ ಕಾಂಗ್ರೆಸ್ ಒಂದೇ ಗುಂಪು :
“ನಮ್ಮಲ್ಲಿ ಯಾವುದೇ ಗುಂಪು ಇಲ್ಲ. ಕೃಷ್ಣ ಅವರ ಕಾಲದಲ್ಲೂ ಗುಂಪುಗಾರಿಕೆ ಮಾಡಿಲ್ಲ. ಇವತ್ತಿಗೂ ಅವಕಾಶ ಕೊಟ್ಟಿಲ್ಲ. ನನಗೆ ಇರುವುದು ಒಂದೇ ಗುಂಪು, ಅದು ಕಾಂಗ್ರೆಸ್ ಗುಂಪು. ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಮೊದಲ ಆರು ತಿಂಗಳು ನನ್ನನ್ನು ಮಂತ್ರಿ ಮಾಡದೇ ಇದ್ದಾಗಲೂ ನಾನು ಒಂದೇ ಒಂದು ಮಾತನ್ನೂ ಆಡಿರಲಿಲ್ಲ. ಒಟ್ಟಾಗಿ ಕೆಲಸ ಮಾಡುವ ನನ್ನ ನಿರ್ಧಾರ ಅಚಲ”.
“ಹೈಕಮಾಂಡ್ ಹೇಳಿದಂತೆ ನಾವಿಬ್ಬರೂ ಕೆಲಸ ಮಾಡಿಕೊಂಡು ಹೋಗುತ್ತೇವೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು, ಪ್ರತಿಯೊಬ್ಬ ಶಾಸಕರಿಗೆ ಶಕ್ತಿ ತುಂಬಿ, ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವುದು ನಮ್ಮಿಬ್ಬರ ಕರ್ತವ್ಯ. 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಅನೇಕ ಕಾರ್ಯಕ್ರಮ ರೂಪಿಸಿದ್ದು, ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದೇವೆ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ಈ ಇಡೀ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ಮುಖ್ಯಮಂತ್ರಿ ಸ್ಥಾನದ ಹಸ್ತಾಂತರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸದ ಸಿದ್ದರಾಮಯ್ಯ “ಎಲ್ಲವೂ ಹೈಕಮಾಂಡ್ ನಿರ್ಧಾರ” ಎಂದು ಗರಮ್ ಆದರು. ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಇಬ್ಬರೂ ನಾಯಕರು ಇಂದು ಜಂಟಿ ಹೇಳಿಕೆ ನೀಡಿದ್ದರೂ, ಸಿಎಂ ಸ್ಥಾನದ ಅಧಿಕಾರ ಪಡೆಯಲು ಡಿಕೆ ಶಿವಕುಮಾರ್ ಅವರ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿರುತ್ತೆ ಎಂಬುದು ಕಾಂಗ್ರೆಸ್ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತು.






















