ಬೆಂಗಳೂರು, ನ.28 www.bengaluruwire.com : “ಕಾಲೇಜು ದಿನಗಳಲ್ಲಿ ನಾನೊಬ್ಬ ವೈದ್ಯನಾಗಬೇಕೆಂದು ಕನಸು ಕಂಡಿದ್ದೆ. ಆದರೆ ಅಂದು ಅಂಕಗಳ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ. ವೈದ್ಯನಾಗದಿದ್ದರೂ ಆರೋಗ್ಯ ಸಚಿವನಾಗಿ ಸೇವೆ ಸಲ್ಲಿಸಿದೆ. ಇದೀಗ ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯದಿಂದ ‘ಗೌರವ ಡಾಕ್ಟರೇಟ್’ ಅರಸಿ ಬಂದಿರುವುದು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ,” ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಭಾವುಕವಾಗಿ ನುಡಿದರು.
ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಯು.ಟಿ.ಖಾದರ್ ಫರೀದ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಪದವಿ ಸ್ವೀಕರಿಸಿ ಮಾತನಾಡಿದ ಖಾದರ್, ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದರು. “ವಿಜ್ಞಾನ ವಿಷಯದಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಡಾಕ್ಟರ್ ಕನಸು ಕೈಬಿಟ್ಟು ಕಾನೂನು ಅಧ್ಯಯನ ಮಾಡಿದೆ. ಆದರೆ ವಿಧಿ ಮತ್ತೆ ನನ್ನನ್ನು ಆರೋಗ್ಯ ಸಚಿವನನ್ನಾಗಿ ಮಾಡಿತು. ಇಂದು ವಿಶ್ವವಿದ್ಯಾಲಯದ ಈ ಗೌರವ ನನ್ನ ಮೇಲಿನ ಪ್ರೀತಿ ಮತ್ತು ವಿಶ್ವಾಸವನ್ನು ತೋರಿಸುತ್ತದೆ. ಭವಿಷ್ಯದಲ್ಲೂ ವಿವಿಯ ಮೌಲ್ಯವನ್ನು ಎತ್ತಿಹಿಡಿಯುವ ದಾರಿಯಲ್ಲಿ ಸಾಗುತ್ತೇನೆ,” ಎಂದು ಸಂತಸ ವ್ಯಕ್ತಪಡಿಸಿದರು.
ಸಮಾಜದಲ್ಲಿ ಸಾಮರಸ್ಯದ ಅಗತ್ಯವನ್ನು ಪ್ರತಿಪಾದಿಸಿದ ಅವರು, “ನಾವೆಲ್ಲರೂ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಪ್ರೀತಿ-ವಿಶ್ವಾಸದಿಂದ ಬದುಕಬೇಕು. ಭಾರತೀಯರೆಲ್ಲರೂ ಒಗ್ಗಟ್ಟಾಗಿ ಸಾಗೋಣ,” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿ ಕುಲಪತಿ ಡಾ.ಜಯಕರ ಎಸ್.ಎಂ, ಕುಲಸಚಿವರಾದ ಕೆ.ಟಿ.ಶಾಂತಲಾ ಮತ್ತು ಪ್ರೊ.ಸಿ.ಎಸ್.ಕರಿಗಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.






















