ಬೆಂಗಳೂರು, ನ.27 www.bengaluruwire.com : ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ಆಸಕ್ತಿ ಮತ್ತು ಕೌತುಕವನ್ನು ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷಿ ‘ಶಾಲೆಯ ಅಂಗಳದಲ್ಲಿ ತಾರಾಲಯ’ (ಡಿಜಿಟಲ್ ಮೊಬೈಲ್ ಪ್ಲಾನೆಟೇರಿಯಂ) ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಚಾಲನೆ ನೀಡಿದರು.
ವಿಧಾನಸೌಧದ ಆವರಣದಲ್ಲಿ ಬುಧವಾರ ಹಸಿರು ನಿಶಾನೆ :
ತೋರುವ ಮೂಲಕ ನೂತನ ವಾಹನಗಳಿಗೆ ವಿಧ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು. ನಗರ ಪ್ರದೇಶದ ಮಕ್ಕಳಿಗೆ ಸೀಮಿತವಾಗಿದ್ದ ತಾರಾಲಯದ ಅನುಭವವನ್ನು ಹಳ್ಳಿ ಮಕ್ಕಳಿಗೂ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ. “ವಿಜ್ಞಾನ ಕಲಿಕೆಯಲ್ಲಿ ಇದೊಂದು ಕ್ರಾಂತಿಕಾರಿ ಬದಲಾವಣೆಯಾಗಿದ್ದು, ಗ್ರಾಮೀಣ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಇದು ಸಹಕಾರಿಯಾಗಲಿದೆ. ಈಗಾಗಲೇ ಈ ಯೋಜನೆಯು 17 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಿರುವುದು ನಮ್ಮ ಸಾಧನೆಗೆ ಸಾಕ್ಷಿ,” ಎಂದು ಸಿಎಂ ಹೆಮ್ಮೆಯಿಂದ ನುಡಿದರು.
ಜಿಲ್ಲೆಗಳಿಗೂ ವಿಸ್ತರಣೆ:

ಈ ಸಂದರ್ಭದಲ್ಲಿ ಮಾತನಾಡಿದ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, “ನಮ್ಮ ಸರ್ಕಾರ ವಿಜ್ಞಾನ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಪ್ರಸ್ತುತ ಆಯ್ದ ಜಿಲ್ಲೆಗಳಲ್ಲಿ ಮಾತ್ರ ಜಾರಿಯಲ್ಲಿರುವ ಈ ಸೇವೆಯನ್ನು, ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶದೊಂದಿಗೆ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು,” ಎಂದು ಘೋಷಿಸಿದರು.
ಏನಿದು ತಂತ್ರಜ್ಞಾನ? :
ಗ್ರಾಮೀಣ ವಿದ್ಯಾರ್ಥಿಗಳು ತಾರಾಲಯ ವೀಕ್ಷಣೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸುಸಜ್ಜಿತ ವಾಹನಗಳನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ 5 ಮೀಟರ್ ಗಾತ್ರದ ಗುಂಬಜ್ (Dome), 360-ಡಿಗ್ರಿ ಫಿಶ್ ಐ ಲೆನ್ಸ್ ಪ್ರೊಜೆಕ್ಟರ್, ಎಸಿ ಮತ್ತು ಅತ್ಯಾಧುನಿಕ ಸೌಂಡ್ ಸಿಸ್ಟಮ್ ಅಳವಡಿಸಲಾಗಿದೆ. ಶಾಲಾ ಆವರಣದಲ್ಲೇ ಕುಳಿತು ಮಕ್ಕಳು ಬ್ರಹ್ಮಾಂಡದ ವಿಸ್ಮಯಗಳನ್ನು ಕಣ್ತುಂಬಿಕೊಳ್ಳಲು ಇದು ವೇದಿಕೆ ಕಲ್ಪಿಸಲಿದೆ.
ಕಾರ್ಯಕ್ರಮದಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಇಲಾಖಾ ಕಾರ್ಯದರ್ಶಿ ಎನ್. ಮಂಜುಳಾ ಹಾಗೂ ಕೆ-ಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕ ಸದಾಶಿವ ಪ್ರಭು ಉಪಸ್ಥಿತರಿದ್ದರು.






















