ನವದೆಹಲಿ/ಮುಂಬೈ ನ.26 www.bengaluruwire.com : ವಾಣಿಜ್ಯ ನಗರಿ ಮುಂಬೈ ಮೇಲೆ ಪಾಕಿಸ್ತಾನ ಪ್ರೇರಿತ ಉಗ್ರರು ನಡೆಸಿದ ಭೀಕರ ದಾಳಿಗೆ ಇಂದಿಗೆ 17 ವರ್ಷ ತುಂಬಿದ್ದು, ದೇಶಾದ್ಯಂತ ‘ನೆವರ್ ಎವರ್’ (NeverEver) ಎಂಬ ದೃಢ ಸಂಕಲ್ಪದೊಂದಿಗೆ ಹುತಾತ್ಮರಿಗೆ ಭಾವಪೂರ್ಣ ಗೌರವ ಸಲ್ಲಿಸಲಾಗುತ್ತಿದೆ.
2008ರ ನವೆಂಬರ್ 26ರಂದು ನಡೆದ ಈ ದುರಂತವನ್ನು ಸ್ಮರಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇಶದ ರಕ್ಷಣೆಗಾಗಿ ಪ್ರಾಣತೆತ್ತ ವೀರ ಯೋಧರು ಹಾಗೂ ಅಮಾಯಕ ನಾಗರಿಕರ ತ್ಯಾಗವನ್ನು ಸ್ಮರಿಸಿದ್ದಾರೆ.

“ಮತ್ತೆಂದು ಸಂಭವಿಸಬಾರದು” (Never Ever) ಘೋಷವಾಕ್ಯದಡಿ ವಿಶೇಷ ಶ್ರದ್ಧಾಂಜಲಿ :
ಈ ಕರಾಳ ಘಟನೆಯ ವಾರ್ಷಿಕೋತ್ಸವದ ಅಂಗವಾಗಿ, ರಾಷ್ಟ್ರೀಯ ಭದ್ರತಾ ಪಡೆ (NSG) ಮುಂಬಯಿಯ ಗೇಟ್‌ವೇ ಆಫ್ ಇಂಡಿಯಾದಲ್ಲಿ ‘ನೆವರ್ ಎವರ್’ (ಮತ್ತೆಂದು ಸಂಭವಿಸಬಾರದು) ಎಂಬ ಶೀರ್ಷಿಕೆಯಡಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ಇದು ಕೇವಲ ಶ್ರದ್ಧಾಂಜಲಿಯಾಗಿರದೆ, ಇಂತಹ ದಾಳಿ ಮರುಕಳಿಸದಂತೆ ತಡೆಯುವ ಸಾರ್ವಜನಿಕ ಪ್ರತಿಜ್ಞೆಯಾಗಿದೆ. ಹುತಾತ್ಮರಿಗೆ ಬೆಳಗಿಸಿದ ಮೇಣದಬತ್ತಿಗಳ ಮೇಣವನ್ನು ಸಂಗ್ರಹಿಸಿ ‘ಜೀವಂತ ಸ್ಮಾರಕ’ (Living Memorial) ನಿರ್ಮಿಸಲು ನಿರ್ಧರಿಸಲಾಗಿದ್ದು, ಇದು ಭಾರತದ ಒಗ್ಗಟ್ಟು ಮತ್ತು ಸ್ಥೈರ್ಯವನ್ನು ಸಂಕೇತಿಸಲಿದೆ.

ಯುವಜನತೆಯಿಂದ ಶಾಂತಿ ಪ್ರತಿಜ್ಞೆ :
ಮುಂಬೈನ 26 ಶಾಲೆಗಳು ಮತ್ತು 11 ಕಾಲೇಜುಗಳ ವಿದ್ಯಾರ್ಥಿಗಳು ಗೇಟ್‌ವೇ ಆಫ್ ಇಂಡಿಯಾದಲ್ಲಿ ಸೇರಿ, ರಾಷ್ಟ್ರೀಯ ಭದ್ರತೆ ಮತ್ತು ಶಾಂತಿಯ ಕುರಿತು ಪ್ರತಿಜ್ಞೆ ಸ್ವೀಕರಿಸಿದರು. ರಾತ್ರಿ ಗೇಟ್‌ವೇ ಆಫ್ ಇಂಡಿಯಾವನ್ನು ತ್ರಿವರ್ಣ ಧ್ವಜದ ಬಣ್ಣಗಳಲ್ಲಿ ಬೆಳಗಿಸಲಾಗಿದ್ದು, ‘NeverEver’ ಎಂಬ ಸಂದೇಶವನ್ನು ಸ್ಮಾರಕದ ಮೇಲೆ ಪ್ರದರ್ಶಿಸುವ ಮೂಲಕ ಉಗ್ರವಾದದ ವಿರುದ್ಧ ಭಾರತದ ಒಗ್ಗಟ್ಟನ್ನು ಪ್ರದರ್ಶಿಸಲಾಯಿತು.
ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ :
ಸೋಷಿಯಲ್ ಮೀಡಿಯಾ ಮೂಲಕ ಸಂದೇಶ ರವಾನಿಸಿರುವ ಗೃಹ ಸಚಿವ ಅಮಿತ್ ಶಾ, “ಭಯೋತ್ಪಾದನೆ ಇಡೀ ಮಾನವ ಕುಲಕ್ಕೆ ಕಂಟಕವಾಗಿದೆ. ಭಾರತವು ಭಯೋತ್ಪಾದಕ ಜಾಲಗಳು ಮತ್ತು ಅವುಗಳ ಪೋಷಕರ ವಿರುದ್ಧ ಕಠಿಣ ಮತ್ತು ರಾಜಿರಹಿತ ನಿಲುವಿಗೆ ಬದ್ಧವಾಗಿದೆ,” ಎಂದು ಪುನರುಚ್ಚರಿಸಿದ್ದಾರೆ.
26/11ರ ದಾಳಿ ಭಾರತದ ಭದ್ರತಾ ನೀತಿಯಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಿದ್ದು, ಪ್ರಸ್ತುತ ಭಾರತವು ‘ಜೀರೋ ಟಾಲರೆನ್ಸ್’ (Zero Tolerance) ನೀತಿಯನ್ನು ಅನುಸರಿಸುತ್ತಿದೆ. ಕರಾವಳಿ ಭದ್ರತೆ, ಗುಪ್ತಚರ ಇಲಾಖೆಗಳ ಸಮನ್ವಯ ಮತ್ತು ನಗರಗಳಲ್ಲಿ ಎನ್‌ಎಸ್‌ಜಿ ಹಬ್‌ಗಳ ಸ್ಥಾಪನೆಯ ಮೂಲಕ ಭದ್ರತೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತಿಹಾಸದ ಕರಾಳ ಪುಟದ ಇಣುಕು ನೋಟ :
2008ರ ನವೆಂಬರ್ 26 ರಿಂದ 29ರವರೆಗೆ ಲಷ್ಕರ್-ಎ-ತೈಬಾ ಸಂಘಟನೆಯ 10 ಉಗ್ರರು ಮುಂಬೈನ ತಾಜ್ ಹೋಟೆಲ್, ಒಬೆರಾಯ್ ಟ್ರೈಡೆಂಟ್ ಸೇರಿದಂತೆ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 166 ಜನರು ಸಾವನ್ನಪ್ಪಿದ್ದರು.
40 ಬುಲೆಟ್ ಗುಂಡೇಟು ತಿಂದು ಉಗ್ರ ಕಸಬ್ ಹಿಡಿದು ಹುತಾತ್ಮರಾದ ಪೊಲೀಸ್ :
ಆತನ ಹೆಸರೇ ತುಕಾರಾಮ್ ಓಂಬ್ಲೆ. ಭಾರತೀಯ ಪೊಲೀಸ್ ಅಧಿಕಾರಿ ಮತ್ತು ಭಾರತೀಯ ಸೇನೆಯ ಮಾಜಿ ಯೋಧ. ಇವರು ಮುಂಬೈ ಪೊಲೀಸರ ಸಹಾಯಕ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಆಗಿ ಸೇವೆ ಸಲ್ಲಿಸಿದ್ದರು. ಮುಂಬೈನ ಗಿರ್ಗಾಮ್ ಚೌಪಟ್ಟಿಯಲ್ಲಿ ನಡೆದ 26/11 ದಾಳಿಯ ಸಮಯದಲ್ಲಿ ಉಗ್ರಗಾಮಿ ಅಜ್ಮಲ್ ಕಸಬ್ ನಿಂದ 40 ಸುತ್ತು AK47 ಗುಂಡು ಹಾರಿಸಿದರೂ, ಆ ಗುಂಡೇಟು ತಿಂದು, ಆ ಉಗ್ರನನ್ನು ಜೀವಂತವಾಗಿ ಸೆರೆಹಿಡಿದು ಹುತಾತ್ಮರಾದರು. ಇವರ ಧೈರ್ಯ ಮತ್ತು ಶೌರ್ಯ ಸಾಹಸಕ್ಕೆ ಇಡೀ ಭಾರತವೇ ಅಂದು ತಲೆಬಾಗಿ ನಮಸ್ಕರಿಸಿತ್ತು.

ಭಾರತ ಸರ್ಕಾರವು 2009 ರ ಜನವರಿ 26ರಂದು ದೇಶದ ಅತ್ಯುನ್ನತ ಶಾಂತಿಕಾಲದ ಮಿಲಿಟರಿ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಮರಣೋತ್ತರವಾಗಿ ಓಂಬ್ಳೆ ಅವರ ಹೆಸರಲ್ಲಿ ಅವರ ಕುಟುಂಬಕ್ಕೆ ನೀಡಿ ಗೌರವಿಸಿತು.






















