ಬೆಂಗಳೂರು, ನ.16 www.bengaluruwire.com : ಹೊರರಾಜ್ಯದಲ್ಲಿ ತಯಾರಾಗುತ್ತಿದ್ದ ನಕಲಿ ನಂದಿನಿ ಬ್ರಾಂಡ್‌ನ ಕಲಬೆರಕೆ ತುಪ್ಪವನ್ನು ಬೆಂಗಳೂರು ನಗರದಾದ್ಯಂತ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಸಿಸಿಬಿ ವಿಶೇಷ ವಿಚಾರಣಾ ದಳ ಮತ್ತು ಕೆಎಂಎಫ್ ಜಾಗೃತ ದಳದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಭೇದಿಸಿದ್ದಾರೆ.
ಯಶಸ್ವಿ ಜಂಟಿ ಕಾರ್ಯಾಚರಣೆ: ಕೋಟಿ ಮೌಲ್ಯದ ಮಾಲು ವಶ :
ಸಿಸಿಬಿ ವಿಶೇಷ ವಿಚಾರಣಾ ದಳ ಮತ್ತು ಕೆ.ಎಂ.ಎಫ್. ಜಾಗೃತ ದಳದ ಅಧಿಕಾರಿಗಳು ಗುಪ್ತ ಮಾಹಿತಿಯನ್ನು ಸಂಗ್ರಹಿಸಿ, ನ.14 ರಂದು ಜಂಟಿ ಕಾರ್ಯಾಚರಣೆ ನಡೆಸಿ ಒಟ್ಟು 4 ಜನ ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯ ವೇಳೆ, ಬೆಂಗಳೂರಿನ ಚಾಮರಾಜಪೇಟೆಯ ನಂಜಾಂಬ ಅಗ್ರಹಾರದಲ್ಲಿರುವ ಕೃಷ್ಣ ಎಂಟರ್‌ಪ್ರೈಸಸ್‌ನ ಮಾಲೀಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಸೇರಿದ ಗೋಡೋನ್ ಮತ್ತು ಅಂಗಡಿಗಳ ಸರಕು ಸಾಗಾಣಿಕೆ ವಾಹನಗಳ ಮೇಲೆ ದಾಳಿ ನಡೆಸಲಾಗಿದೆ.



ತಮಿಳುನಾಡು ರಾಜ್ಯದಲ್ಲಿ ಕಲಬೆರಕೆ ತುಪ್ಪವನ್ನು ಸಿದ್ಧಪಡಿಸಿ, ನಕಲಿ ನಂದಿನಿ ತುಪ್ಪದ ಸ್ಯಾಚೆಟ್ ಮತ್ತು ಪ್ಲಾಸ್ಟಿಕ್ ಬಾಟಲಿಗಳಿಗೆ ತುಂಬಿ, ಕೆಎಂಎಫ್‌ನ ಅಧಿಕೃತ ಪರವಾನಗಿ ಪಡೆದ ಬೆಂಗಳೂರಿನ ಆರೋಪಿತರಿಗೆ ಸರಬರಾಜು ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಗಳು, ಈ ಕಲಬೆರಕೆ ತುಪ್ಪದ ಸ್ಯಾಚೆಟ್ ಮತ್ತು ಬಾಟಲ್‌ಗಳನ್ನು ಅಸಲಿ ನಂದಿನಿ ತುಪ್ಪವೆಂದು ಬಿಂಬಿಸಿ, ಬೆಂಗಳೂರಿನ ವಿವಿಧ ಸಗಟು, ಚಿಲ್ಲರೆ ಅಂಗಡಿಗಳು ಮತ್ತು ನಂದಿನಿ ಪಾರ್ಲರ್‌ಗಳಿಗೆ ಮೂಲ ನಂದಿನಿ ತುಪ್ಪದ ಬೆಲೆಗೆ ಸರಬರಾಜು ಮಾಡುತ್ತಿದ್ದರು.
ಜಪ್ತಿ ಮಾಡಿದ ವಸ್ತುಗಳ ವಿವರ :
ವಶಪಡಿಸಿಕೊಂಡಿರುವ ಮಾಲುಗಳ ಒಟ್ಟು ಮೌಲ್ಯ ₹1,26,95,200/- ಆಗಿದ್ದು, ಇದರಲ್ಲಿ 8,136 ಲೀಟರ್ ಕಲಬೆರಕೆ ತುಪ್ಪ ತುಂಬಿದ ವಿವಿಧ ನಮೂನೆಯ ನಕಲಿ ನಂದಿನಿ ಬ್ರಾಂಡ್‌ನ ಸ್ಯಾಚೆಟ್ ಮತ್ತು ಬಾಟಲಿಗಳು
ಸೇರಿದೆ. ಇದಲ್ಲದೆ ₹60 ಲಕ್ಷ ಮೌಲ್ಯದ 4 ಬೊಲೇರೋ ಕಂಪನಿಯ ಗೂಡ್ಸ್ ವಾಹನಗಳು, ತುಪ್ಪವನ್ನು ತಯಾರು ಮಾಡಲು ಬಳಸುತ್ತಿದ್ದ ಯಂತ್ರಗಳು. ಕಲಬೆರಕೆಗಾಗಿ ಬಳಸುತ್ತಿದ್ದ ತೆಂಗು ಮತ್ತು ಪಾಮ್ ಆಯಿಲ್ ಎಣ್ಣೆಗಳು ಸೇರಿವೆ. ಇದಲ್ಲದೆ ಕೃತ್ಯದಿಂದ ಸಂಪಾದಿಸಿದ ₹1,19,640 ನಗದು ಹಣ, 5 ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಟ್ಟಾರೆ ಈ ಪ್ರಕರಣದ ಬಗ್ಗೆ ಸಿಸಿಬಿ ವಿಶೇಷ ವಿಚಾರಣಾ ದಳದಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.






















