ಬೆಂಗಳೂರು, ನ.15 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಅನಧಿಕೃತ ನಿರ್ಮಾಣಗಳ ವಿರುದ್ಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕೈಗೊಂಡಿರುವ ಕಾರ್ಯಾಚರಣೆ ಮುಂದುವರಿದಿದೆ. ಇಂದು (ನವೆಂಬರ್ 15) ಜೆ.ಪಿ. ನಗರ 8ನೇ ಹಂತ, 1ನೇ ಬ್ಲಾಕ್ ನಲ್ಲಿ ಬರೋಬ್ಬರಿ ರೂ. 16.72 ಕೋಟಿ ಮೌಲ್ಯದ ಆಸ್ತಿಯನ್ನು ಬಿಡಿಎ ವಶಪಡಿಸಿಕೊಂಡಿದೆ.
ಪ್ರಾಧಿಕಾರವು ನೀಡಿದ ಮಾಹಿತಿ ಪ್ರಕಾರ, ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಕೊತ್ತನೂರು ಗ್ರಾಮದ ಸರ್ವೆ ನಂ. 3/2ಬಿ ಮತ್ತು 4 ರ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಸುಮಾರು 18,000 ಚದರ ಅಡಿ ವಿಸ್ತೀರ್ಣದಲ್ಲಿ ವಿವಿಧ ಅಳತೆಯ 20 ನಿವೇಶನಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ಯಶಸ್ವಿಯಾಗಿ ತೆರವುಗೊಳಿಸಿ, ಪ್ರದೇಶವನ್ನು ಪ್ರಾಧಿಕಾರವು ತನ್ನ ಸುಪರ್ದಿಗೆ ಪಡೆದುಕೊಂಡಿದೆ. ವಶಪಡಿಸಿಕೊಂಡ ಭೂಮಿಯ ಮೌಲ್ಯ ಸುಮಾರು ₹16.72 ಕೋಟಿ ಎಂದು ಅಂದಾಜಿಸಲಾಗಿದೆ.
ಪೊಲೀಸ್ ಸಹಕಾರದೊಂದಿಗೆ ಕಾರ್ಯಾಚರಣೆ :
ಈ ಮಹತ್ವದ ಕಾರ್ಯಾಚರಣೆಯನ್ನು ಬಿಡಿಎಯ ಉನ್ನತ ಅಧಿಕಾರಿಗಳ ತಂಡವು ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ನೆರವೇರಿಸಿತು. ಬಿಡಿಎಯ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕರು, ಅಭಿಯಂತರ ಅಧಿಕಾರಿ-3, ದಕ್ಷಿಣ ಮತ್ತು ನಾಡಪ್ರಭು ಕೆಂಪೇಗೌಡ ವಿಭಾಗದ ಕಾರ್ಯಪಾಲಕ ಅಭಿಯಂತರರು ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬಿಡಿಎ ಭೂಮಿ ಒತ್ತುವರಿ ಮತ್ತು ಅನಧಿಕೃತ ನಿರ್ಮಾಣಗಳ ವಿರುದ್ಧ ಪ್ರಾಧಿಕಾರವು ಮುಂದಿನ ದಿನಗಳಲ್ಲಿಯೂ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಲಿದ್ದು, ಸಾರ್ವಜನಿಕರು ಅನಧಿಕೃತ ನಿರ್ಮಾಣಗಳಿಗೆ ಮುಂದಾಗದಂತೆ ಪ್ರಾಧಿಕಾರವು ಎಚ್ಚರಿಕೆ ನೀಡಿದೆ.























