ಬೆಂಗಳೂರು, ನ.15 www.bengaluruwire.com : ರಾಜಧಾನಿಯಲ್ಲಿ ಉದ್ದೇಶಿತ ಸುರಂಗ ರಸ್ತೆ ಯೋಜನೆಯಿಂದ ಐತಿಹಾಸಿಕ ಸ್ಯಾಂಕಿ ಕೆರೆಗೆ ಧಕ್ಕೆಯಾಗುತ್ತಿದ್ದು, ಕಾಂಗ್ರೆಸ್ ಸರ್ಕಾರ ಪರಿಸರ ಹಾಳು ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುರಂಗ ರಸ್ತೆ ನಿರ್ಮಾಣದ ವಿರುದ್ಧ ಪ್ರತಿಪಕ್ಷ ನಾಯಕ ಆರ್. ಅಶೋಕ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರ ಜೊತೆ ನೇತೃತ್ವದಲ್ಲಿ ಸ್ಯಾಂಕಿ ಕೆರೆ ಬಳಿ ಇಂದು ನಡೆದ ಸಹಿ ಸಂಗ್ರಹ ಮತ್ತು ಪರಿಶೀಲನೆ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸುರಂಗ ರಸ್ತೆಗಾಗಿ ಸ್ಯಾಂಕಿ ಕೆರೆಗೆ ಧಕ್ಕೆ ತರಲಾಗುತ್ತಿದೆ ಎಂದು ಅಶೋಕ ದೂರಿದರು. “ನಾವು ಅಭಿವೃದ್ಧಿಯ ವಿರೋಧಿಗಳಲ್ಲ. ಆದರೆ ಕಾಂಗ್ರೆಸ್ ಸರ್ಕಾರ ತರುವ ಯಾವುದೇ ಯೋಜನೆಯು, ಪರಿಸರವನ್ನು ಹಾಳು ಮಾಡಲು ನೋಡುತ್ತದೆ” ಎಂದು ಅವರು ಟೀಕಿಸಿದರು.
ಅನುಮತಿ ಇಲ್ಲದ ಯೋಜನೆ :

ಯೋಜನೆಗೆ ಪರಿಸರ ಇಲಾಖೆ, ಪುರಾತತ್ವ ಇಲಾಖೆ ಮತ್ತು ಅರಣ್ಯ ಇಲಾಖೆ ಸೇರಿದಂತೆ ಯಾವುದೇ ಇಲಾಖೆಗಳಿಂದ ಸೂಕ್ತ ಅನುಮತಿಗಳನ್ನು ಪಡೆದಿಲ್ಲ ಎಂದು ಅಶೋಕ ಆರೋಪಿಸಿದರು. ಸುರಂಗ ಕೊರೆದರೆ ಉಂಟಾಗುವ ಹೂಳನ್ನು ಎಲ್ಲಿಗೆ ಸಾಗಿಸಲಾಗುತ್ತದೆ ಎಂಬ ಬಗ್ಗೆ ಯಾವುದೇ ಖಾತರಿ ಇಲ್ಲ ಎಂದರು.
ಕಾಸು ಹೊಡೆಯುವ ಯೋಜನೆ :
“ಕಾಸು ಹೊಡೆಯುವ ಯೋಜನೆ ನಗರಕ್ಕೆ ಬೇಕಿಲ್ಲ” ಎಂದು ಅವರು ನೇರವಾಗಿ ಗುಡುಗಿದರು. ಈಗಾಗಲೇ ಬಿಹಾರ ಚುನಾವಣೆಗೆ ಹಣ ಕಳುಹಿಸಲಾಗಿದೆ. ಈ ಸುರಂಗ ರಸ್ತೆ ಯೋಜನೆ ಹಣ ಮಾಡುವ ಉದ್ದೇಶದಿಂದ ಕೂಡಿದೆ ಎಂದು ಟೀಕಿಸಿದರು. ಮೆಟ್ರೋ ಯೋಜನೆಯಿಂದ ಟ್ರಾಫಿಕ್ ಕಡಿಮೆಯಾಗಿದೆ. ಮೆಟ್ರೋ ಸುಧಾರಣೆ ಮಾಡಿ ಬೇಗ ಪೂರ್ಣಗೊಳಿಸಿದರೆ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಅಶೋಕ ಸಲಹೆ ನೀಡಿದರು.
ನಗರದ ಜನತೆ ಮೇಲೆ ಟೋಲ್ ಹೊರೆ :
ಸುರಂಗ ರಸ್ತೆ ನಿರ್ಮಾಣವಾದರೆ ಪ್ರತಿ ವಾಹನಕ್ಕೆ ಬರೋಬ್ಬರಿ ₹20,000 ನಷ್ಟು ಟೋಲ್ ಪಾವತಿಸಬೇಕಾಗಬಹುದು. ತೆರಿಗೆಗಳ ಭಾರದಿಂದ ಈಗಾಗಲೇ ಬೆಂಗಳೂರಿನ ಜನರಿಗೆ ಚಿತ್ರಹಿಂಸೆಯಾಗಿದೆ. ತ್ಯಾಜ್ಯ ಮತ್ತು ನೀರಿನ ದರಗಳು ಏರಿಕೆಯಾಗಿವೆ. ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಬಿಹಾರದ ಜನರಿಗೆ ಅಪಮಾನ :
ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಿ, ಕಾಂಗ್ರೆಸ್‌ನ ‘ವೋಟ್ ಚೋರಿ’ ಆರೋಪಗಳನ್ನು ಅಶೋಕ ತಳ್ಳಿಹಾಕಿದರು. ಬಿಹಾರದ ಜನತೆ ವೋಟ್ ಚೋರಿ ಅಭಿಯಾನವನ್ನು ತಿರಸ್ಕರಿಸಿದ್ದಾರೆ. ಮತಪಟ್ಟಿ ಪರಿಷ್ಕರಣೆ ವೇಳೆ ಅನ್ಯ ದೇಶಗಳ ಹಾಗೂ ಸತ್ತವರ ಹೆಸರು ರದ್ದಾಗಿದೆ. ವೋಟ್ ಚೋರಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಬಿಹಾರದ ಜನತೆಗೆ ಅಪಮಾನ ಮಾಡುತ್ತಿದೆ. ಕಾಂಗ್ರೆಸ್ ನಾಯಕರು ತಕ್ಷಣ ಜನರ ಮುಂದೆ ಕ್ಷಮೆ ಕೇಳಬೇಕು ಎಂದು ಅಶೋಕ ಆಗ್ರಹಿಸಿದರು.
ಬಿಹಾರ ಚುನಾವಣೆಯಲ್ಲಿ ಗೆಲ್ಲದಿರುವುದರಿಂದ ಸಿಎಂ ಸಿದ್ದರಾಮಯ್ಯ ಬಲಿಷ್ಠರಾಗಿದ್ದು, ಇನ್ನು ಮುಂದೆ ರಾಹುಲ್ ಗಾಂಧಿ ಅವರೇ ಸಿದ್ದರಾಮಯ್ಯನವರ ಮಾತು ಕೇಳಬೇಕಾಗುತ್ತದೆ ಎಂದು ಅಶೋಕ ಹೇಳಿದರು.























