ಬೆಂಗಳೂರು, ನ.10 www.bengaluruwire.com : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ವು ಮೈಸೂರು ನಗರ ಸಾರಿಗೆಯಲ್ಲಿ ಜಾರಿಗೆ ತಂದಿರುವ ‘ಧ್ವನಿ ಸ್ಪಂದನ’ – ಆನ್‌ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್ ಉಪಕ್ರಮಕ್ಕಾಗಿ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ವತಿಯಿಂದ ನೀಡಲಾಗುವ “ನಗರ ಸಾರಿಗೆಯಲ್ಲಿ ಉತ್ಕೃಷ್ಠತಾ ಪ್ರಶಸ್ತಿ”ಗೆ ಭಾಜನವಾಗಿದೆ.
‘ಧ್ವನಿ ಸ್ಪಂದನ’ – ಆನ್‌ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್ ಈ ಯೋಜನೆಯನ್ನು ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ 200 ಬಸ್‌ಗಳಲ್ಲಿ ಯಶಸ್ವಿಯಾಗಿ ಕೆಎಸ್‌ಆರ್‌ಟಿಸಿ
ಜಾರಿಗೆ ತಂದಿದೆ. ಈ ಯೋಜನೆ ಜಾರಿಯಿಂದಾಗಿ, ದೃಷ್ಟಿ ವಿಕಲಚೇತನ ಪ್ರಯಾಣಿಕರ ಪ್ರಯಾಣದ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಹಾಗೂ ಇದರಿಂದ ಅವರ ಆತ್ಮವಿಶ್ವಾಸ, ಭದ್ರತೆ ಮತ್ತು ಸಂಚಾರದ ಸ್ವಾತಂತ್ರ್ಯದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ತಂತ್ರಜ್ಞಾನವನ್ನು ಐಐಟಿ ದೆಹಲಿಯ ರೈಸ್ಡ್ ಲೈನ್ಸ್ ಫೌಂಡೇಶನ್ ಇದನ್ನು ಅಭಿವೃದ್ಧಿಪಡಿಸಿದ್ದು, ಜರ್ಮನಿಯ ಜಿಇಜೆಡ್ ಸಂಸ್ಥೆಯ ಸಹಯೋಗದಲ್ಲಿ ಕಾರ್ಯಗತಗೊಳಿಸಲಾಗಿದೆ. ಈ ವ್ಯವಸ್ಥೆಯು ಧ್ವನಿ ಆಧಾರಿತ ಸೂಚನೆಗಳ ಮೂಲಕ ಬಸ್ ಗುರುತಿಸಲು ಮತ್ತು ಪ್ರವೇಶ ಸ್ಥಳವನ್ನು ಸುರಕ್ಷಿತವಾಗಿ ಪತ್ತೆಹಚ್ಚಲು ನೆರವಾಗುತ್ತದೆ.

ನ.09ರಂದು ಗುರುಗ್ರಾಮ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಸಚಿವರು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಶಬರಿಮಲೆ ಭಕ್ತರಿಗಾಗಿ ನ. 28 ರಿಂದ ನೂತನ ವೋಲ್ವೋ ಸೇವೆ :
ಶಬರಿಮಲೆ ಯಾತ್ರಾರ್ಥಿಗಳು ಮತ್ತು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ವತಿಯಿಂದ ಬೆಂಗಳೂರಿನಿಂದ ಕೇರಳದ ನೀಲಕ್ಕಲ್ (ಪಂಪಾ-ಶಬರಿಮಲೈ) ಮಾರ್ಗದಲ್ಲಿ ಹೊಸ ವೋಲ್ವೋ ಬಸ್ ಸೇವೆಯನ್ನು ಆರಂಭಿಸಲಾಗುತ್ತಿದೆ.
* ಆರಂಭಿಕ ದಿನಾಂಕ: ಈ ಸೇವೆ ದಿನಾಂಕ 28/11/2025 ರಿಂದ ಕಾರ್ಯಾಚರಣೆ ಮಾಡಲಿದೆ.
* ಮಾರ್ಗ: ಬೆಂಗಳೂರು – ನೀಲಕ್ಕಲ್ (ಪಂಪಾ-ಶಬರಿಮಲೈ) ವಯಾ ಮೈಸೂರು, ಕ್ಯಾಲಿಕಟ್/ಕೋಝಿಕ್ಕೋಡ್, ಗುರುವಾಯೂರು, ತ್ರಿಶೂರು, ಅಂಗಮಾಲೈ, ಕೊಟ್ಟಾಯಂ, ಏರುಮಲೈ ಮಾರ್ಗದಲ್ಲಿ ಸಂಚರಿಸಲಿದೆ.
* ಪ್ರಯಾಣ ದರ: ವಯಸ್ಕರಿಗೆ ಪ್ರಯಾಣದ ದರ ರೂ. 1950-00 ಆಗಿದೆ.
ವೇಳಾ ಪಟ್ಟಿ ವಿವರಗಳು:
ಶಾಂತಿನಗರ ಬಸ್ ನಿಲ್ದಾಣದಿಂದ ಹೊರಡುವ ಸಮಯ ಮಧ್ಯಾಹ್ನ 1.50 ಹಾಗೂ ನೀಲಕ್ಕಲ್ (ಪಂಪಾ-ಶಬರಿಮಲೈ) ತಲುಪುವ ಸಮಯ ಮರು ದಿನ ಬೆಳಗ್ಗೆ 06:45.
ಪುನಃ ನೀಲಕ್ಕಲ್ ನಿಂದ ಬಸ್ ಹೊರಡುವ ಸಮಯ : ಸಂಜೆ 6 ಮತ್ತು ಅಲ್ಲಿಂದ ಬೆಂಗಳೂರು ತಲುಪುವ ಸಮಯ : ಮರು ದಿನ ಬೆಳಿಗ್ಗೆ 10 ಗಂಟೆಗೆ. ಈ ಹೊಸ ವೋಲ್ವೋ ಸೇವೆಯು ಯಾತ್ರಾ ಸಮಯದಲ್ಲಿ ಭಕ್ತರಿಗೆ ಸುಖಕರ ಪ್ರಯಾಣಕ್ಕೆ ಅನುವು ಮಾಡಿಕೊಡಲಿದೆ.






















