ಬೆಂಗಳೂರು, ನ.10 www.bengaluruwire.com : ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2 (T2) ರಲ್ಲಿ ಕೆಲವರು ಸಾಮೂಹಿಕವಾಗಿ ನಮಾಜ್ (Mass Namaz) ಮಾಡಿರುವ ವಿಡಿಯೋ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಬಿಜೆಪಿ (Karnataka BJP), ವಿಮಾನ ನಿಲ್ದಾಣದಂತಹ ಹೆಚ್ಚಿನ ಭದ್ರತಾ ವಲಯದಲ್ಲಿ (High Security Zone) ಇಂತಹ ಧಾರ್ಮಿಕ ಚಟುವಟಿಕೆಗೆ ಹೇಗೆ ಅವಕಾಶ ನೀಡಲಾಯಿತು ಎಂದು ಪ್ರಶ್ನಿಸಿದೆ.
ಘಟನೆ ವಿವರ ಹೀಗಿದೆ :
ವರದಿಗಳ ಪ್ರಕಾರ, ಹಜ್ ಯಾತ್ರಿಕರನ್ನು (Hajj Pilgrims) ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ ಬಂದಿದ್ದವರ ಪೈಕಿ ಕೆಲವರು ಟರ್ಮಿನಲ್ 2 ರ ಆವರಣದಲ್ಲಿ ಒಟ್ಟಾಗಿ ನಮಾಜ್ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ, ಬಿಜೆಪಿ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿ ವಕ್ತಾರರಿಂದ ಸ್ಪಷ್ಟನೆಗೆ ಆಗ್ರಹ:
ಕರ್ನಾಟಕ ಬಿಜೆಪಿ ವಕ್ತಾರರಾದ ವಿಜಯ್ ಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರನ್ನು ಗುರಿಯಾಗಿಸಿ ಈ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ್ದಾರೆ.
ಭಾನುವಾರ ರಾತ್ರಿ ಟ್ವೀಟ್ ಮಾಡಿರುವ ಅವರು, “ಈ ವ್ಯಕ್ತಿಗಳು ಹೆಚ್ಚಿನ ಭದ್ರತಾ ವಲಯದಲ್ಲಿ ನಮಾಜ್ ಮಾಡಲು ಪೂರ್ವಾನುಮತಿ ಪಡೆದಿದ್ದಾರೆಯೇ?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಜೊತೆಗೆ, “ಸಂಬಂಧಪಟ್ಟ ಅಧಿಕಾರಿಗಳಿಂದ ಸೂಕ್ತ ಅನುಮತಿ ಪಡೆದ ನಂತರ ಆರ್ಎಸ್ಎಸ್ ಪಾಠ ಸಂಚಾಲನೆ ನಡೆಸಿದಾಗ ಸರ್ಕಾರ ಏಕೆ ಆಕ್ಷೇಪಿಸುತ್ತದೆ, ಆದರೆ ನಿರ್ಬಂಧಿತ ಸಾರ್ವಜನಿಕ ಪ್ರದೇಶದಲ್ಲಿ ಅಂತಹ ಚಟುವಟಿಕೆಗಳಿಗೆ ಕಣ್ಣು ಮುಚ್ಚಿ ಕುಳಿತಿದೆ?” ಎಂದು ಪ್ರಶ್ನಿಸುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಕ್ಷಪಾತದ ಆರೋಪ ಮಾಡಿದ್ದಾರೆ.
ಈ ಬೆಳವಣಿಗೆಯು ರಾಜ್ಯದಲ್ಲಿ ಧಾರ್ಮಿಕ ಚಟುವಟಿಕೆಗಳು ಮತ್ತು ಸಾರ್ವಜನಿಕ ಸ್ಥಳಗಳ ಬಳಕೆಯ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರ ಈ ಕುರಿತು ಅಧಿಕೃತವಾಗಿ ಪ್ರತಿಕ್ರಿಯೆ ನೀಡಬೇಕಿದೆ. (ಸುದ್ದಿ ಮೂಲ : ANI)






















