ಬೆಂಗಳೂರು, ನ.10 www.bengaluruwire.com : ಆರ್ಥಿಕ ಸಂಕಷ್ಟದಲ್ಲಿರುವ ಆಟೋ ಚಾಲಕರ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಆದಿಚುಂಚನಗಿರಿ ಮಠ ಹೊರಲಿದೆ ಎಂದು ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಭರವಸೆ ನೀಡಿದರು.
ದಿವಂಗತ ನಟ ಶಂಕರ್‌ನಾಗ್ ಅವರ ಜನ್ಮದಿನದ ಅಂಗವಾಗಿ ಜಯನಗರದ ಶಾಲಿನಿ ಗ್ರೌಂಡ್‌ನಲ್ಲಿ “ಪೀಸ್ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್” ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ “12ನೇ ವರ್ಷದ ಚಾಲಕರ ದಿನಾಚರಣೆ” ಹಾಗೂ ಚಿನ್ನದ ಪದಕ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೆಚ್ಚುತ್ತಿರುವ ತಂತ್ರಜ್ಞಾನಕ್ಕೆ ಆಟೋ ಚಾಲಕರು ತೆರೆದುಕೊಳ್ಳಬೇಕು, ತಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಮತ್ತು ಆರ್ಥಿಕ ಸಮಸ್ಯೆ ಎದುರಿಸಿದರೆ ಮಠವು ಬೆಂಬಲಕ್ಕೆ ನಿಲ್ಲಲಿದೆ ಎಂದು ಸ್ವಾಮೀಜಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್, ಆಟೋ ಚಾಲಕರ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರವು ಸರ್ಕಾರಿ ಸ್ವಾಮ್ಯದ “ಆಟೋ ಅಭಿವೃದ್ಧಿ ನಿಗಮ” ರಚಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಅನಧಿಕೃತವಾಗಿ ಓಡಾಡುತ್ತಿರುವ ವೈಟ್‌ಬೋರ್ಡ್ ಬೈಕ್ ಮತ್ತು ಟ್ಯಾಕ್ಸಿ ಸೇವೆಗಳನ್ನು ಬ್ಯಾನ್ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.

ಶಾಸಕ ಸಿ.ಕೆ. ರಾಮಮೂರ್ತಿ ಸಹ ಮುಂದಿನ ಅಧಿವೇಶನದಲ್ಲಿ ವೈಟ್‌ಬೋರ್ಡ್ ಸೇವೆಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ಧ್ವನಿ ಎತ್ತಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸನ್ನಡತೆ ಹೊಂದಿದ್ದ 7 ಆಟೋ ಚಾಲಕ/ಚಾಲಕಿಯರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು ಮತ್ತು 4 ಸಾವಿರ ಆಟೋ ಚಾಲಕರಿಗೆ ಸಮಸ್ತ್ರ ವಿತರಿಸಲಾಯಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಟಿ ರಚಿತಾ ರಾಮ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.






















