ಬೆಂಗಳೂರು/ಹಾಸನ/ಮಂಡ್ಯ (ನ. 9) www.bengaluruwire.com : ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಸಿ.ಪಿ. ರಾಧಾಕೃಷ್ಣನ್ ಅವರು ಇಂದು (ನವೆಂಬರ್ 9) ಒಂದು ದಿನದ ಕರ್ನಾಟಕ ಪ್ರವಾಸ ಕೈಗೊಂಡು ಹಲವು ಮಹತ್ವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಬೆಳಗ್ಗೆ ಬೆಂಗಳೂರಿನ ಯಲಹಂಕ ಏರ್‌ಫೋರ್ಸ್ ಸ್ಟೇಷನ್‌ಗೆ ವಿಶೇಷ ಸೇನಾ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಉಪರಾಷ್ಟ್ರಪತಿಗಳನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಕೇಂದ್ರದ ಬೃಹತ್ ಕೈಗಾರಿಕೆಗಳ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ನಗರಾಭಿವೃದ್ಧಿ ಸಚಿವ ಸುರೇಶ್ ಬಿ.ಎ., ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
ಯಲಹಂಕದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಹಾಸನ ಜಿಲ್ಲೆಯ ಶ್ರವಣಬೆಳಗೊಳ, ಮಂಡ್ಯ ಜಿಲ್ಲೆಯ ಮೇಲುಕೋಟೆ ಹಾಗೂ ಮೈಸೂರು ಜಿಲ್ಲೆಗಳಿಗೆ ಪ್ರಯಾಣ ಬೆಳೆಸಿದರು.
ಶ್ರವಣಬೆಳಗೊಳದಲ್ಲಿ, 20ನೇ ಶತಮಾನದ ಪ್ರಥಮಾಚಾರ್ಯ ಚಾರಿತ್ರ ಚಕ್ರವರ್ತಿ ಪ.ಪೂ. ಆಚಾರ್ಯ ಶ್ರೀ 108 ಶಾಂತಿಸಾಗರ ಮಹಾರಾಜರ ಪ್ರತಿಮೆಯನ್ನು ಉಪರಾಷ್ಟ್ರಪತಿಗಳು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, “ಭಗವಾನ್ ಮಹಾವೀರರು ನೀಡಿದ ‘ಬದುಕು ಮತ್ತು ಬದುಕಲು ಬಿಡಿ’ ಎಂಬ ದೈವಿಕ ಸಂದೇಶದಿಂದ ನಾವೆಲ್ಲ ಸ್ಫೂರ್ತಿ ಪಡೆಯಬೇಕು” ಎಂದರು.

ಶಾಂತಿಸಾಗರ ಮಹಾರಾಜರು ಸಂಯಮದ ಜೀವಂತ ಸಾಕಾರವಾಗಿದ್ದರು ಎಂದು ಅವರು ಶ್ಲಾಘಿಸಿದರು. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಶ್ರೀಕ್ಷೇತ್ರ ಶ್ರವಣಬೆಳಗೊಳದ ನಾಲ್ಕನೇ ಬೆಟ್ಟಕ್ಕೆ ನಾಮಕರಣ ಫಲಕ ಅನಾವರಣಗೊಳಿಸಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಂಸದ ಶ್ರೇಯಸ್ ಪಟೇಲ್ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
ಇದಕ್ಕೂ ಮುನ್ನ, ಉಪರಾಷ್ಟ್ರಪತಿಗಳು ಮಂಡ್ಯ ಜಿಲ್ಲೆಯ ಮೇಲುಕೋಟೆಗೆ ಭೇಟಿ ನೀಡಿ ಐತಿಹಾಸಿಕ ಚೆಲುವರಾಯಸ್ವಾಮಿ ದೇವರ ದರ್ಶನ ಪಡೆದರು. ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಉಪಸ್ಥಿತರಿದ್ದರು. ರಾಜ್ಯದ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ಥಳಗಳಿಗೆ ಭೇಟಿ ನೀಡಿದ ನಂತರ, ಉಪರಾಷ್ಟ್ರಪತಿಗಳು ಇಂದು ಸಂಜೆಯೇ ನವದೆಹಲಿಗೆ ಮರಳುವ ನಿರೀಕ್ಷೆಯಿದೆ.






















