ಬೆಂಗಳೂರು, ನ.06 www.bengaluruwire.com : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಅಧಿಕಾರಿಗಳು ಕೊನೆಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಸರ್ಕಾರಿ ಮುದ್ರಣಾಲಯ (Press Layout) ಬಡಾವಣೆಯ “ಗುಂಡಿಗಳ ರಾಜ” ರಸ್ತೆಗೆ ಕೊನೆಗೂ ಕಾಯಕಲ್ಪ ಕಲ್ಪಿಸಿದ್ದಾರೆ. ಇದು ಬೆಂಗಳೂರು ವೈರ್ ವರದಿ ಫಲಶ್ರುತಿ.
ಪ್ರೆಸ್ ಲೇಔಟ್ ನಲ್ಲಿ ಎರಡನೇ ಮುಖ್ಯರಸ್ತೆಗೆ ತಾಗಿಕೊಂಡಂತಿರುವ 30 ಅಡಿ ಅಗಲ, ಸುಮಾರು 100 ಮೀಟರ್ ಉದ್ದದ ಈ ರಸ್ತೆಗೆ ಟಾರ್ ಅಥವಾ ಗುಂಡಿ ಮುಚ್ಚದೇ 4-5 ವರ್ಷಗಳಾಗಿತ್ತು.

ವಯಸ್ಸಾದವರು, ಮಕ್ಕಳು- ಮಹಿಳೆಯರೆನ್ನದೆ ಹಲವಾರು ಮಂದಿ ಈ ರಸ್ತೆಯಲ್ಲಿ ಚಲಿಸಿ ಗಾಡಿಯಿಂದ ಬಿದ್ದು ಎದ್ದಿದ್ದಾರೆ. ಕೆಲವರಿಗೆ ಮೂಳೆ ಮುರಿತಗಳಾಗಿದೆ. ಕೆಲವರಿಗೆ ತೀವ್ರ ಗಾಯಗಳಾಗಿ ಆಸ್ಪತ್ರೆ ಸೇರಿಸಿದ್ದಾರೆ. ಈ ಬಗ್ಗೆ ವಿಷಯ ತಿಳಿದು ಸೆ.19 ರಂದು ಬೆಂಗಳೂರು ವೈರ್ ನಲ್ಲಿ “BW SPECIAL | “ಜಾಗ ಬಿಡಿ….ಇದು ಗುಂಡಿಗಳ ರಾಜ ರಸ್ತೆ” : ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ರಸ್ತೆ ದುರವಸ್ಥೆ” ಶೀರ್ಷಿಕೆಯಡಿ ವಿಶೇಷ ವರದಿ ಪ್ರಸಾರ ಮಾಡಿತ್ತು.

ಈ ಬಗ್ಗೆ ಸೆ.26ರಂದು ಸ್ಥಳಕ್ಕೆ ಧಾವಿಸಿದ ಪಶ್ಚಿಮ ನಗರ ಪಾಲಿಕೆ ವಲಯದ ಪ್ರಧಾನ ಇಂಜಿನಿಯರ್ ಸ್ವಯಂಪ್ರಭ ಅವರ ತಂಡ ಗುಂಡಿಬಿದ್ದ ರಸ್ತೆಯನ್ನು ಸರಿಪಡಿಸುವ ಭರವಸೆಯನ್ನು ನೀಡಿತ್ತು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜಾತಿಗಣತಿಯಲ್ಲಿ ಪಾಲಿಕೆಯ ಹೆಚ್ಚಿನ ಆಧಿಕಾರಿ, ನೌಕರರನ್ನು ನಿಯೋಜಿಸಿದ್ದರಿಂದ ಪಾಲಿಕೆ ವ್ಯಾಪ್ತಿಯ ರಾ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಅಡ್ಡಿಯಾಗಿತ್ತು. ಈಗ ಗಣತಿ ಕಾರ್ಯ ಮುಗಿದ ಕಾರಣ ಪಾಲಿಕೆ ಎಂಜಿನಿಯರ್ ಗಳು ಬೆಂಗಳೂರು ವೈರ್ ಗೆ ನೀಡಿದ ಭರವಸೆಯಂತೆ ನ.05 ರಂದು ಈ ಗುಂಡಿಬಿದ್ದ ರಸ್ತೆಗೆ ಡಾಂಬರ್ ಹಾಕುವ ಕೆಲಸ ನಿರ್ವಹಿಸಿದ್ದಾರೆ.


ಈ ರಸ್ತೆಯಲ್ಲಿ ಕಾರು- ದ್ವಿಚಕ್ರವಾಹನಗಳು, ಯಾವುದೇ ವಾಹನವಿಲ್ಲದೇ 10-12 ಕಿ.ಮೀ ವೇಗದಲ್ಲೂ ಚಲಿಸಲಾಗದಷ್ಟು ಹದಗೆಟ್ಟು ಹೋಗಿದೆ. ಈ ಬಗ್ಗೆ ಇಲ್ಲಿನ ನಿವಾಸಿಗಳು ಬಿಬಿಎಂಪಿ ಸಹಾಯವಾಣಿಗೆ, ಪಾಲಿಕೆಯ ಮೊಬೈಲ್ ಆಪ್ ಗೆ ದೂರು ನೀಡಿದರೂ ರಸ್ತೆಗುಂಡಿ ಸರಿಪಡಿಸಲು ಹೋಗಿಲ್ಲ. ಇಲ್ಲಿನ ಅತ್ಯಂತ ದೊಡ್ಡ ಗುಂಡಿಯಲ್ಲಿ ಮಳೆ ನೀರು ತುಂಬಿದನ್ನು ಕಂಡರೆ ಯಾವುದೋ ಉಪಖಂಡ ಕಂಡಂತಾಗುತ್ತೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಇದೀಗ ಈ ರಸ್ತೆಯಲ್ಲಿನ ಗುಂಡಿನ ದೊಡ್ಡ ದೊಡ್ಡ ಗುಂಡಿಗಳನ್ನು ಪಾಲಿಕೆ ಡಾಂಬರ್ ಹಾಕಿ ಮುಚ್ಚಿದೆ.
ಸಾರ್ವಜನಿಕರ ಕುಂದು-ಕೊರತೆ, ಬವಣೆಗಳನ್ನು ಆಡಳಿತ ನಡೆಸುವ ಅಧಿಕಾರಸ್ಥರಿಗೆ ಸುದ್ದಿಯ ಮೂಲಕ ತಲುಪಿಸಿ, ಅವುಗಳಿಗೆ ಸೂಕ್ತ ಪರಿಹಾರ ಒದಗಿಸುವ ಕಾರ್ಯವನ್ನು ಬೆಂಗಳೂರು ವೈರ್ ಸದಾ ಮಾಡುತ್ತಲೇ ಇದೆ. ಮುಂದೆಯೂ ಮಾಡಲಿದೆ. ನಮ್ಮ ಸಾಮಾಜಿಕ ಜವಾಬ್ದಾರಿ ಬಗ್ಗೆ ನಾವು ಬದ್ಧರಾಗಿದ್ದೇವೆ. ಓದುಗರಾದ ನಿಮ್ಮ ಬೆಂಬಲ ಸದಾ ನಮ್ಮ ಮೇಲಿರುವುದಕ್ಕೆ ನಮ್ಮ ಧನ್ಯವಾದಗಳು.























