ಬೆಂಗಳೂರು, ಅ.28 www.bengaluruwire.com : ಜಲಸಂರಕ್ಷಣೆ ಮತ್ತು ಅಂತರ್ಜಲ ಅಭಿವೃದ್ಧಿಗೆ ಬೃಹತ್ ಹೆಜ್ಜೆ ಇಟ್ಟಿರುವ ಸಣ್ಣ ನೀರಾವರಿ ಇಲಾಖೆಯ ಮಹತ್ವದ ‘ವೃಷಭಾವತಿ ಕಣಿವೆ ಯೋಜನೆ’ಯು ನಿರೀಕ್ಷಿತ ವೇಗದಲ್ಲಿ ಪ್ರಗತಿ ಕಾಣುತ್ತಿದೆ. ಮೂರು ಹಂತಗಳ ಪೈಕಿ ಮೊದಲ ಹಂತವು ಈತನಕ ಶೇ.50ರಷ್ಟಕ್ಕೂ ಹೆಚ್ಚಿನ ಪ್ರಗತಿ ಕಂಡಿದೆ.
ಬೆಂಗಳೂರು ಜಲಮಂಡಳಿ (BWSSB) ವತಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 308 ದಶಲಕ್ಷ ಲೀ. ನೀರನ್ನು ಅಂದರೆ ಸುಮಾರು 4 ಟಿಎಂಸಿ ನೀರು ಬಳಸಿಕೊಂಡು ಈ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯು ಒಟ್ಟು 3 ಹಂತಗಳಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಒಟ್ಟು 244 ಕೆರೆಗಳಿಗೆ ನೀರನ್ನು ಹರಿಸಲು ಉದ್ದೇಶಿಸಿದೆ. ಈ ಯೋಜನೆಯ ಮುಖ್ಯ ಉದ್ದೇಶ ಅಂತರ್ಜಲ ಮಟ್ಟವನ್ನು ಅಭಿವೃದ್ಧಿಪಡಿಸುವುದಾಗಿದೆ.

ಮೊದಲ ಹಂತದ ಪ್ರಗತಿ :
ಯೋಜನೆಯ ಮೊದಲನೇ ಹಂತವು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಲ್ಲಿನ 70 ಕೆರೆಗಳಿಗೆ 2 ಲಿಫ್ಟ್‌ಗಳ ಮೂಲಕ ನೀರನ್ನು ಹರಿಸುವ ಕಾಮಗಾರಿಯನ್ನು ಒಳಗೊಂಡಿದೆ.

ವೆಚ್ಚ ಮತ್ತು ಗುತ್ತಿಗೆದಾರರು: ಮೊದಲ ಹಂತದ ಯೋಜನೆಯ ಅಂದಾಜು ಮೊತ್ತ ₹1,081.00 ಕೋಟಿ. ಈ ಕಾಮಗಾರಿಯ ಗುತ್ತಿಗೆಯನ್ನು ಶಂಕರನಾರಾಯಣ ಕನ್ಸ್‌ಟ್ರಕ್ಷನ್ ಸಂಸ್ಥೆಗೆ ನೀಡಲಾಗಿದೆ.

ಯೋಜನೆಯ ಅವಧಿ: ಒಪ್ಪಂದದ ಪ್ರಕಾರ ಯೋಜನೆಯ ಅವಧಿ 36 ತಿಂಗಳುಗಳು ಮತ್ತು 5 ವರ್ಷಗಳ ನಿರ್ವಹಣೆಯನ್ನು ಒಳಗೊಂಡಿದೆ. ಟೆಂಡರ್ ಕರಾರಿನಂತೆ ಮೊದಲನೇ ಹಂತದ ಯೋಜನೆಯನ್ನು ಜುಲೈ-2026 ರಲ್ಲಿ ಪೂರ್ಣಗೊಳಿಸಬೇಕಾಗಿದೆ.
ಪ್ರಸ್ತುತ ಪ್ರಗತಿ: ಯೋಜನೆಯು ಜುಲೈ 2023 ರಲ್ಲಿ ಪ್ರಾರಂಭವಾಗಿದ್ದು, ಈತನಕ ಶೇ.50 ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿದೆ. ಒಟ್ಟಾರೆ 103.20 ಕಿ.ಮೀ ಪೈಪ್‌ಲೈನ್ ಉದ್ದದಲ್ಲಿ, 81.3 ಕಿ.ಮೀ ಉದ್ದದ ಪೈಪ್‌ಗಳನ್ನು ಪೂರೈಕೆ ಮಾಡಲಾಗಿದ್ದು, 39.50 ಕಿ.ಮೀ ಉದ್ದದ ಪೈಪ್‌ಲೈನ್ ಅಳವಡಿಕೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.

ನಾಯಂಡಹಳ್ಳಿ ಎಸ್‌ಟಿಪಿ ಪಂಪ್‌ಹೌಸ್‌ನ ಕಾಮಗಾರಿ ಪ್ರಗತಿಯಲ್ಲಿದೆ. ಹುರುಳೀಹಳ್ಳಿ ಕೆರೆಯ ಬಳಿ ಪಂಪ್‌ಹೌಸ್ ನಿರ್ಮಾಣಕ್ಕೆ ಭೂಸ್ವಾಧೀನ ಸಮಸ್ಯೆ ಬಗೆಹರಿದಿದೆ. ಅನ್ಯ ಇಲಾಖೆಗಳಿಂದ ಅನುಮತಿ ವಿಳಂಬದಿಂದಾಗಿ ಕಾಮಗಾರಿಗೆ ತೊಡಕಾಗಿದ್ದು, ಪ್ರಸ್ತುತ 89.50 ಕಿ.ಮೀ ಉದ್ದಕ್ಕೆ ಅನುಮತಿ ಪಡೆದು ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದೆ. ಅಧಿಕಾರಿಯೊಬ್ಬರ ಹೇಳಿಕೆಯಂತೆ, ಡೆಡ್‌ಲೈನ್‌ಗಿಂತ ನಾಲ್ಕೈದು ತಿಂಗಳು ಮೊದಲ ಹಂತ ತಡವಾಗುವ ಸಾಧ್ಯತೆಯಿದೆ.
ಸಂಸ್ಕರಿತ ನೀರು ಕೈಗಾರಿಕೆಗಳಿಗೆ :
ಈ ಯೋಜನೆಯಿಂದ ಸುಮಾರು 15 ಎಂಎಲ್ ಡಿ ನೀರನ್ನು ನೆಲಮಂಗಲ ತಾಲ್ಲೂಕಿನ ಸೋಂಪುರ ಮತ್ತು ದಾಬಾಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ ಒದಗಿಸಲಾಗುತ್ತಿದ್ದು, ಕೈಗಾರಿಕೆಗಳ ನೀರಿನ ಬೇಡಿಕೆಯನ್ನು ಪೂರೈಸಲು ಸಹಾಯವಾಗಲಿದೆ.

ಯೋಜನೆಯ ಪ್ರಮುಖ ಅನುಕೂಲಗಳೇನು ? :
* ವ್ಯರ್ಥವಾಗುತ್ತಿದ್ದ ಸಂಸ್ಕರಿತ ನೀರನ್ನು ಬರಪೀಡಿತ ಜಿಲ್ಲೆಗಳ ಅಂತರ್ಜಲ ಅಭಿವೃದ್ಧಿಗೆ ಬಳಸಲಾಗುತ್ತಿದೆ.
* ಅತೀಯಾದ ಅಂತರ್ಜಲ ಬಳಕೆಯಿಂದ ಬರಿದಾಗಿದ್ದ ಭೂಮಿಯಲ್ಲಿ ಅಂತರ್ಜಲ ಮಟ್ಟವು ಮರುಪೂರಣಗೊಳ್ಳಲಿದೆ.
* ಕೊಳವೆಬಾವಿ ಅವಲಂಬಿತ ಕೃಷಿ ಕ್ಷೇತ್ರ ವೃದ್ಧಿಸಲಿದೆ.
* ಆಳದಿಂದ ನೀರನ್ನು ಎತ್ತಲು ಬಳಕೆಯಾಗುತ್ತಿದ್ದ ಇಂಧನ (ವಿದ್ಯುತ್) ಉಳಿತಾಯವಾಗಲಿದೆ.
* ವಾರ್ಷಿಕ ಸುಮಾರು 4.00 TMC ನೀರನ್ನು ಹೊರಸಾಗಿಸುವುದರಿಂದ ಬೆಂಗಳೂರು ನಗರದ ಮಳೆ ನೀರಿನ ಕಾಲುವೆಗಳ ಮೇಲಿನ ಒತ್ತಡ ಕಡಿಮೆಯಾಗಿ ನಗರದ ಪ್ರವಾಹ ನಿಯಂತ್ರಣದಲ್ಲಿ ಸಹಕಾರಿಯಾಗಲಿದೆ.
* ದೇಶದಲ್ಲಿ ಶುದ್ಧೀಕರಿಸಿದ ನೀರಿನ ಮರುಬಳಕೆ ಮಾಡಿಕೊಳ್ಳುವ ರಾಜ್ಯಗಳ ಪೈಕಿ ಕರ್ನಾಟಕವು ಅಗ್ರಮಾನ್ಯ ರಾಜ್ಯವಾಗಿ ಹೊರಹೊಮ್ಮಲು ಈ ಯೋಜನೆ ಸಹಕಾರಿಯಾಗಲಿದೆ.

ನೀರಿನ ಗುಣಮಟ್ಟದ ಮೇಲ್ವಿಚಾರಣೆ :
ಯೋಜನೆಯ ಯಶಸ್ಸಿಗೆ ನೀರಿನ ಗುಣಮಟ್ಟ ಬಹಳ ಮುಖ್ಯವಾಗಿದೆ. ಈ ಸಂಬಂಧ, ಬೆಂಗಳೂರು ಜಲಮಂಡಳಿ (BWSSB) ಯಿಂದ ಸಂಸ್ಕರಣಾ ಘಟಕದಲ್ಲಿನ ನೀರಿನ ಗುಣಮಟ್ಟ ಪರೀಕ್ಷೆಗೆ ಕ್ರಮ ಕೈಗೊಂಡಿದ್ದು, ಸಣ್ಣ ನೀರಾವರಿ ಇಲಾಖೆಯಿಂದಲೂ ಪ್ರತ್ಯೇಕ ಸಂಸ್ಥೆಗೆ ಗುತ್ತಿಗೆ ನೀಡಿ ಪರೀಕ್ಷೆಗಳನ್ನು ನಡೆಸಲು ಕ್ರಮವಹಿಸಲಾಗುತ್ತಿದೆ. ಇದರ ಜೊತೆಗೆ, ಯೋಜನೆಯ ಪ್ರಾರಂಭದ ಮುನ್ನ ಮತ್ತು ಅನುಷ್ಠಾನದ ನಂತರದ ಪರಿಣಾಮದ ಕುರಿತು ಅಧ್ಯಯನ ಕೈಗೊಳ್ಳಲು ಭಾರತೀಯ ವಿಜ್ಞಾನ ಸಂಸ್ಥೆಗೆ (IISc) ಆ ನೀಡಲಾಗಿದೆ.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ಈ ಯೋಜನೆಯ ಮೂಲಕ ‘ಓಡುವ ನೀರನ್ನು ನಿಲ್ಲಿಸಿ, ನಿಂತ ನೀರನ್ನು ಇಂಗಿಸಿ’ ಎಂಬ ಧ್ಯೇಯದೊಂದಿಗೆ ಅಂತರ್ಜಲವನ್ನು ಮರುಪೂರಣಗೊಳಿಸಿ, ಗ್ರಾಮೀಣ ಭಾಗ ಮತ್ತು ಕೃಷಿ ಕ್ಷೇತ್ರಕ್ಕೆ ಪೂರಕ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮೂರು ಹಂತದ ಯೋಜನೆ ಪೂರ್ಣವಾಗಲು 3 ವರ್ಷ:
“ಮೊದಲ ಹಂತದ ಯೋಜನೆ ಈತನಕ ಶೇ.50 ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿದೆ. ಎರಡನೇ ಹಂತದ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಎರಡನೇ ಹಂತವನ್ನು ಪೂರ್ಣಗೊಳಿಸಲು ಟೆಂಡರ್ ಪ್ರಕ್ರಿಯೆಯ ನಂತರ ಸುಮಾರು ಎರಡೂ ಕಾಲು ವರ್ಷ ಬೇಕಾಗುತ್ತದೆ. ಮೂರನೇ ಹಂತದ ಆರಂಭಕ್ಕೆ ಮುನ್ನ ನಿಧಿಯನ್ನು ಪಡೆದುಕೊಳ್ಳಬೇಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಒಟ್ಟಾರೆ ವೃಷಭಾವತಿ ವ್ಯಾಲಿ ಯೋಜನೆ ಪೂರ್ಣಗೊಳ್ಳಲು ಮೂರು ವರ್ಷಗಳಾಗಬಹುದು. ಎರಡನೇ ಮತ್ತು ಮೂರನೇ ಹಂತದ ಡಿಪಿಆರ್ ತಯಾರಿಕಾ ಕಾರ್ಯವು ಪ್ರಗತಿಯಲ್ಲಿದೆ.”
– ಎನ್.ಎಸ್.ಬೋಸರಾಜು, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ























