ಬೆಂಗಳೂರು, ಅ.28 www.bengaluruwire.com : ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಹಿತ್ಯಾಸಕ್ತರಿಗಾಗಿ ರಾಷ್ಟ್ರೋತ್ಥಾನ ಸಾಹಿತ್ಯವು ಆಯೋಜಿಸಿರುವ 5ನೇ ವರ್ಷದ ಕನ್ನಡ ಪುಸ್ತಕ ಹಬ್ಬವು ನವೆಂಬರ್ 1 ರಿಂದ ಡಿಸೆಂಬರ್ 7ರ ವರೆಗೆ 37 ದಿನಗಳ ಕಾಲ ನಡೆಯಲಿದೆ.
ರಾಷ್ಟ್ರೋತ್ಥಾನ ಪರಿಷತ್‌ನ ಕೇಶವಶಿಲ್ಪ ಸಭಾಂಗಣದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ಜೊತೆಗೆ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪುಸ್ತಕ ಹಬ್ಬದ ಕುರಿತು ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ವಿಶ್ವಸ್ಥರಾದ ಕೆ.ಎಸ್. ನಾರಾಯಣ್ ಅವರು ಸಾಹಿತ್ಯ-ಸಂಸ್ಕೃತಿ ಉತ್ಸವ ಮಾಹಿತಿ ನೀಡಿದರು. ನವೆಂಬರ್ 1 ಬೆಳಿಗ್ಗೆ 11 ಗಂಟೆಗೆ ಮೈಸೂರು ರಾಜವಂಶಸ್ಥರು ಹಾಗೂ ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪುಸ್ತಕ ಹಬ್ಬವನ್ನು ಉದ್ಘಾಟಿಸಲಿದ್ದಾರೆ.
ಡಾ. ಆರ್. ಬಾಲಸುಬ್ರಮಣ್ಯಂ ಮತ್ತು ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 9.30ಕ್ಕೆ ತಾಯಿ ಭುವನೇಶ್ವರಿಯ ಭವ್ಯ ಶೋಭಾಯಾತ್ರೆಯೂ ನಡೆಯಲಿದೆ.

ಪುಸ್ತಕಗಳ ಮೇಲೆ ರಿಯಾಯಿತಿ, ಸಾಂಸ್ಕೃತಿಕ ವೈಭವ :
ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 9ರವರೆಗೆ ನಡೆಯುವ ಈ ಹಬ್ಬದಲ್ಲಿ ರಾಷ್ಟ್ರೋತ್ಥಾನ ಪ್ರಕಾಶನದ ಜೊತೆಗೆ ಬೇರೆ ಬೇರೆ ಪ್ರಕಾಶಕರ ಪುಸ್ತಕಗಳು ಶೇ 10 ರಿಂದ ಶೇ 50ರ ವರೆಗೆ ರಿಯಾಯಿತಿ ದರದಲ್ಲಿ ಲಭ್ಯವಿರಲಿವೆ. ಸಾಹಿತ್ಯ, ಪುರಾಣ ಮತ್ತು ಆಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳು ಮಾರಾಟಕ್ಕಿರಲಿವೆ. ಈ ಬಾರಿ ಸುಮಾರು 10 ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.
ಪುಸ್ತಕ ಪ್ರದರ್ಶನದೊಂದಿಗೆ ಪ್ರತಿದಿನ ಸಾಯಂಕಾಲ ಸಂಗೀತ, ನೃತ್ಯ, ಯಕ್ಷಗಾನ, ಹಾಸ್ಯ, ಹರಿಕಥೆ, ಗಮಕ, ನಾಟಕ, ಅಷ್ಟಾವಧಾನದಂತಹ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾಡಿನ ಹೆಸರಾಂತ ಕಲಾವಿದರು ನಡೆಸಿಕೊಡಲಿದ್ದಾರೆ. ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು, ಅನಕೃ ಪ್ರಶಸ್ತಿ ಪ್ರದಾನ
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ, ಚರ್ಚಾಸ್ಪರ್ಧೆ, ಪುಸ್ತಕ ಪರಿಚಯ, ಲೇಖನ ಸ್ಪರ್ಧೆ, ‘ಮಂಕುತಿಮ್ಮನ ಕಗ್ಗ ಹೇಳುವ ಸ್ಪರ್ಧೆ’ ಸೇರಿದಂತೆ ವಿವಿಧ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಬಾರಿಯ ಪುಸ್ತಕ ಹಬ್ಬದಲ್ಲಿ ಅನಕೃ ಪ್ರತಿಷ್ಥಾನ ನೀಡುವ ಅನಕೃ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ನಡೆಯಲಿದೆ. 2024ರ ಸಾಲಿಗೆ ಎಲ್‌ವಿ ಶಾಂತಕುಮಾರಿ ಹಾಗೂ 2025ರ ಸಾಲಿಗೆ ಶತಾವಧಾನಿ ಆರ್. ಗಣೇಶ್ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕ ಹಬ್ಬಕ್ಕೆ ಬಂದು ಪುಸ್ತಕ ಖರೀದಿಸಲು ಆಸಕ್ತಿ ತೋರುತ್ತಿರುವುದು ಸಂತಸ ತಂದಿದೆ ಎಂದು ರಾಷ್ಟ್ರೋತ್ಥಾನ ಸಾಹಿತ್ಯದ ಉಸ್ತುವಾರಿ ಸುಬ್ರಹ್ಮಣ್ಯ ಬಿಎ ಹೇಳಿದರು.























