ಬೆಂಗಳೂರು, ಅ.27 www.bengaluruwire.com : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ)ದ 2025-2028ನೇ ಸಾಲಿನ ರಾಜ್ಯ ಮತ್ತು ಜಿಲ್ಲಾ ಘಟಕಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಭರ್ಜರಿಯಾಗಿ ಸಂಪನ್ನಗೊಂಡಿದ್ದು, ಒಟ್ಟು 784 ಸ್ಥಾನಗಳಿಗೆ 1447 ಸ್ಪರ್ಧಾಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಅಕ್ಟೋಬರ್ 27ರ ಸೋಮವಾರ ಕೊನೆಯ ದಿನವಾಗಿತ್ತು. ಕೆಯುಡಬ್ಲ್ಯೂಜೆ ರಾಜ್ಯ ಘಟಕ ಮತ್ತು 31 ಜಿಲ್ಲೆಗಳ ಜಿಲ್ಲಾ ಘಟಕಗಳ (ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು, ಖಜಾಂಚಿ, ಜಿಲ್ಲಾ ಕಾರ್ಯಕಾರಿ ಸಮಿತಿ ಮತ್ತು ರಾಜ್ಯ ಕಾರ್ಯಕಾರಿ ಸಮಿತಿ) ಒಟ್ಟು 784 ಸ್ಥಾನಗಳಿಗೆ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ.
ಅವಿರೋಧ ಆಯ್ಕೆ ಬಹುತೇಕ ಖಚಿತ:
ಸಂಘದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷರಾದ ಶಿವಾನಂದ ತಗಡೂರ್ ಅವರು ತಮ್ಮ ಬೆಂಬಲಿಗರೊಂದಿಗೆ ಕೇಂದ್ರ ಕಚೇರಿಯಲ್ಲಿ ಕೊನೆಯ ದಿನವಾದ ಇಂದು ನಾಮಪತ್ರ ಸಲ್ಲಿಸಿದರು. ಮೂಲಗಳ ಪ್ರಕಾರ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶಿವಾನಂದ ತಗಡೂರ್ ಅವರದ್ದು ಮಾತ್ರವೇ ನಾಮಪತ್ರ ಸಲ್ಲಿಕೆಯಾಗಿದ್ದು, ಅವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.

ಚುನಾವಣೆಯ ಮುಂದಿನ ಪ್ರಕ್ರಿಯೆಗಳ ವಿವರ:
ಚುನಾವಣಾ ವೇಳಾಪಟ್ಟಿ ಕುರಿತು ಕೆಯುಡಬ್ಲ್ಯುಜೆ ಮುಖ್ಯ ಚುನಾವಣಾಧಿಕಾರಿ ಎನ್. ರವಿಕುಮಾರ್ (ಟೆಲೆಕ್ಸ್) ಅವರು ಈ ಕೆಳಕಂಡಂತೆ ಮಾಹಿತಿ ನೀಡಿದ್ದಾರೆ :
* ನಾಮಪತ್ರ ಪರಿಶೀಲನೆ: ಅಕ್ಟೋಬರ್ 28, 2025 (ಮಂಗಳವಾರ) – ಜಿಲ್ಲಾ ಮತ್ತು ರಾಜ್ಯ ಘಟಕಗಳಲ್ಲಿ ಏಕಕಾಲಕ್ಕೆ.
* ನಾಮಪತ್ರ ಹಿಂಪಡೆಯಲು ಕೊನೆಯ ದಿನ: ಅಕ್ಟೋಬರ್ 30, 2025 (ಗುರುವಾರ).
* ಮತದಾನ: ನವೆಂಬರ್ 09, 2025 (ಭಾನುವಾರ) – ಜಿಲ್ಲಾ ಮತ್ತು ರಾಜ್ಯ ಘಟಕದಲ್ಲಿ ಏಕಕಾಲಕ್ಕೆ ನಡೆಯಲಿದೆ.
ಒಟ್ಟಾರೆ, 784 ಸ್ಥಾನಗಳಿಗೆ 1447 ನಾಮಪತ್ರಗಳು ಸಲ್ಲಿಕೆಯಾಗಿರುವುದು ಸಂಘದ ಚುನಾವಣೆಯ ಬಗೆಗಿನ ತೀವ್ರ ಪೈಪೋಟಿ, ಆಸಕ್ತಿ ಮತ್ತು ಉತ್ಸಾಹವನ್ನು ಸೂಚಿಸುತ್ತದೆ.






















