ಮೈಸೂರು/ಬೆಂಗಳೂರು, ಅ.26 www.bengaluruwire.com : ಕರ್ನಾಟಕದ ಜೀವನಾಡಿ ಕಾವೇರಿ ನದಿಯು ಈ ವರ್ಷ ಉಕ್ಕಿ ಹರಿಯುತ್ತಿದ್ದು, ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ (KRS) ಜಲಾಶಯವು ಒಂದೇ ವರ್ಷದಲ್ಲಿ ಮೂರನೇ ಬಾರಿಗೆ ಭರ್ತಿಯಾಗಿ ದಾಖಲೆ ಸೃಷ್ಟಿಸಿದೆ.
93 ವರ್ಷಗಳ ಜಲಾಶಯದ ಇತಿಹಾಸದಲ್ಲಿ ಇದೊಂದು ಅಪರೂಪದ ವಿದ್ಯಮಾನವಾಗಿದೆ. ಉತ್ತಮ ಮಳೆ ಮತ್ತು ಜಲಾಶಯಗಳ ಭರ್ತಿಯಿಂದಾಗಿ ಬೆಂಗಳೂರು ನಗರಕ್ಕೆ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಲಿದೆ ಎಂದು ಜಲಸಂಪನ್ಮೂಲ ಇಲಾಖೆ ತಿಳಿಸಿದೆ.
ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು, “ನಾವು ವರುಣನ ಕೃಪೆಗೆ ಪಾತ್ರರಾಗಿದ್ದೇವೆ. ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಜಲಾಶಯಗಳು, ಕೆರೆಕಟ್ಟೆಗಳು ಭರ್ತಿಯಾಗಿರುವುದರಿಂದ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೆ ಯಾವುದೇ ತೊಂದರೆ ಇಲ್ಲ” ಎಂದಿದ್ದಾರೆ.
ಬೆಂಗಳೂರಿಗೆ ನೀರಿನ ಅಭಯ:

ಬೆಂಗಳೂರಿಗೆ ವರ್ಷಕ್ಕೆ 31 ಟಿಎಂಸಿ ಕುಡಿಯುವ ನೀರು ಅವಶ್ಯಕತೆ ಇದ್ದು, ಪ್ರತಿ ತಿಂಗಳು ಸುಮಾರು 2.60 ಟಿಎಂಸಿ ನೀರು ಬೇಕಾಗುತ್ತದೆ. ಕಾವೇರಿ ಜಲಾನಯನ ಪ್ರದೇಶದ ಕಾವೇರಿ, ಹಾರಂಗಿ, ಹೇಮಾವತಿ, ಕಬಿನಿ ಜಲಾಶಯಗಳು ಅಕ್ಟೋಬರ್‌ನಲ್ಲಿ ಮತ್ತೆ ಭರ್ತಿಯಾಗಿ ಒಟ್ಟಾರೆ 115 ಟಿಎಂಸಿ ನೀರು ಸಂಗ್ರಹವಿದೆ.
ಇದರ ಜೊತೆಗೆ, ಕಾವೇರಿ ನೀರಾವರಿ ನಿಗಮದ 6576 ಕೆರೆಗಳು ಸೇರಿದಂತೆ ಸಣ್ಣ ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ವ್ಯಾಪ್ತಿಯ ಕೆರೆಗಳೂ ಭರ್ತಿಯಾಗಿರುವುದರಿಂದ, ಮುಂಬರುವ ಬೇಸಿಗೆಯಲ್ಲಿ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಕೊರತೆ ಉಂಟಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ತಮಿಳುನಾಡಿಗೆ ಹೆಚ್ಚುವರಿ ನೀರು ಹರಿವು:
ಉತ್ತಮ ಮಳೆಯಿಂದಾಗಿ ಕಾವೇರಿ ವಿವಾದ ಕೂಡ ಪ್ರಕೃತಿದತ್ತವಾಗಿ ಬಗೆಹರಿದಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ (ಜೂನ್ 2025 ರಿಂದ ಮೇ 2026ರ ಜಲವರ್ಷಕ್ಕೆ) ತಮಿಳುನಾಡಿಗೆ ಬಿಳಿಗೊಂಡ್ಲು ಜಲಮಾಪನ ಕೇಂದ್ರದಿಂದ 177.25 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ, ಈ ವರ್ಷ ಉತ್ತಮ ಮಳೆ ಕಾರಣದಿಂದಾಗಿ ಕೇವಲ ಐದೇ ತಿಂಗಳಲ್ಲಿ (ಜೂನ್ ನಿಂದ ಅಕ್ಟೋಬರ್ ಅಂತ್ಯದವರೆಗೆ), ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ 135.412 ಟಿಎಂಸಿ ನೀರು ತಮಿಳುನಾಡಿಗೆ ಹರಿದುಹೋಗಿದೆ.
ಇದುವರೆಗೆ 138.014 ಟಿಎಂಸಿ ನೀರಿನ ಬದಲು 273.426 ಟಿಎಂಸಿ ನೀರು ತಮಿಳುನಾಡಿಗೆ ಹರಿದಿದ್ದು, ಹೆಚ್ಚುವರಿ ನೀರಿನ ಹರಿವು ತಮಿಳುನಾಡು-ಕರ್ನಾಟಕ ಕಾವೇರಿ ನೀರು ಹಂಚಿಕೆ ವಿವಾದವನ್ನು ಸದ್ಯಕ್ಕೆ ಕೊನೆಗೊಳಿಸಿದೆ.
93 ವರ್ಷಗಳ ದಾಖಲೆ:
ಕಾವೇರಿ ಜಲಾಶಯದ 93 ವರ್ಷಗಳ ಇತಿಹಾಸದಲ್ಲಿ ಒಟ್ಟು 77 ಬಾರಿ ಭರ್ತಿಯಾಗಿದ್ದು, 16 ಬಾರಿ ಮಾತ್ರ ಭರ್ತಿಯಾಗಿಲ್ಲ. ಆದರೆ, 2025ರ ಜಲವರ್ಷದಲ್ಲಿ ಜೂನ್‌ನಲ್ಲಿ ಮೊದಲ ಬಾರಿ, ಅಕ್ಟೋಬರ್ ಎರಡನೇ ವಾರದಲ್ಲಿ ಎರಡನೇ ಬಾರಿ ಮತ್ತು ಅಕ್ಟೋಬರ್ 18-23ರ ನಡುವೆ ಜಲಾಶಯ ಗರಿಷ್ಠ ಸಾಮರ್ಥ್ಯ 124.80 ಅಡಿಗಳಷ್ಟು ನೀರು ಕಾಯ್ದುಕೊಳ್ಳುವ ಮೂಲಕ ಮೂರನೇ ಬಾರಿಗೆ ಭರ್ತಿಯಾಗಿ ದಾಖಲೆ ನಿರ್ಮಿಸಿದೆ. ಪ್ರಸ್ತುತ ಕೆಆರ್‌ಎಸ್‌ನಿಂದ ಹೊರಹರಿವು 20,540 ಕ್ಯೂಸೆಕ್ಸ್ ನಷ್ಟಿದೆ.























