ಹಾಸನ, ಅ.25 www.bengaluruwire.com : ಐತಿಹಾಸಿಕ ಹಾಸನಾಂಬ ಜಾತ್ರೆಯು ಅಕ್ಟೋಬರ್ 10 ರಿಂದ 22 ರವರೆಗೆ ನಡೆದಿದ್ದು, ಒಟ್ಟು ₹25.59 ಕೋಟಿ ಆದಾಯ ಸಂಗ್ರಹವಾಗಿದೆ. ಭಕ್ತರ ಕಾಣಿಕೆ ಮತ್ತು ಟಿಕೆಟ್ ಮಾರಾಟದಿಂದ ಈ ಬೃಹತ್ ಮೊತ್ತ ದೇಗುಲದ ಖಜಾನೆ ಸೇರಿದೆ.
ಕಾಣಿಕೆ ಎಣಿಕೆ ಕಾರ್ಯ ಮುಕ್ತಾಯ:
ಶುಕ್ರವಾರ ದೇಗುಲದ ಆಡಳಿತ ಮಂಡಳಿಯು ಹುಂಡಿಗಳನ್ನು ತೆರೆದು ಕಾಣಿಕೆ ಎಣಿಕೆ ಕಾರ್ಯವನ್ನು ಕೈಗೊಂಡಿತು. ಸುಮಾರು 300 ಕ್ಕೂ ಹೆಚ್ಚು ಸಿಬ್ಬಂದಿ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಒಟ್ಟು ಕಾಣಿಕೆ ಮೊತ್ತವನ್ನು ₹3.69 ಕೋಟಿ ಎಂದು ಲೆಕ್ಕ ಹಾಕಲಾಗಿದೆ.

ಟಿಕೆಟ್ ಆದಾಯದಲ್ಲೇ ಸಿಂಹಪಾಲು:

ದೇಗುಲದ ಪ್ರವೇಶಕ್ಕಾಗಿ ಭಕ್ತರು ಖರೀದಿಸಿದ ಟಿಕೆಟ್‌ಗಳಿಂದ ಈ ವರ್ಷ ದಾಖಲೆಯ ಆದಾಯ ಹರಿದು ಬಂದಿದೆ. ಅಕ್ಟೋಬರ್ 10 ರಿಂದ 22 ರವರೆಗಿನ ಟಿಕೆಟ್ ಆದಾಯ ₹21.92 ಕೋಟಿ ಆಗಿದೆ. ಹುಂಡಿ ಕಾಣಿಕೆ ಮತ್ತು ಟಿಕೆಟ್ ಆದಾಯ ಸೇರಿ ಒಟ್ಟಾರೆ ಸಂಗ್ರಹ ₹25.59 ಕೋಟಿ ತಲುಪಿದೆ. ಈ ಬೃಹತ್ ಆದಾಯ ದೇಗುಲ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಬಲ ನೀಡುವ ನಿರೀಕ್ಷೆ ಇದೆ.
ಖರ್ಚು ವೆಚ್ಚದ ವಿವರ ಹೀಗಿದೆ :
ಜಾತ್ರೆ ಯಶಸ್ವಿಗೊಳಿಸಲು ದೇಗುಲದ ಆಡಳಿತ ಮಂಡಳಿಯು ಸಾರ್ವಜನಿಕ ವ್ಯವಸ್ಥೆ, ಪ್ರಸಾದ ವಿತರಣೆ, ಲಡ್ಡು ತಯಾರಿ, ವಿದ್ಯುತ್ ಮತ್ತು ಹೂವಿನ ಅಲಂಕಾರ ಸೇರಿದಂತೆ ಇತರೆ ಹಬ್ಬದ ಖರ್ಚುಗಳಿಗೆ ಸುಮಾರು ₹8 ರಿಂದ ₹10 ಕೋಟಿ ರೂಪಾಯಿಗಳನ್ನು ಬಳಸಿದೆ. ಉಳಿದ ಮೊತ್ತವನ್ನು ದೇವಸ್ಥಾನದ ಖಾತೆಯಲ್ಲಿ ಠೇವಣಿಯಾಗಿ ಇಡಲಾಗುವುದು ಎಂದು ದೇಗುಲದ ಆಡಳಿತ ಮಂಡಳಿಯ ಮೂಲಗಳು ತಿಳಿಸಿವೆ. ಭಕ್ತರ ನಂಬಿಕೆ ಮತ್ತು ಕಾಣಿಕೆಯಿಂದ ಹರಿದು ಬಂದ ಈ ಮೊತ್ತವನ್ನು ದೇವಿಯ ಸೇವೆ ಮತ್ತು ದೇಗುಲದ ಅಭಿವೃದ್ಧಿಗೆ ಸೂಕ್ತ ರೀತಿಯಲ್ಲಿ ಬಳಸಲು ಆಡಳಿತ ಮಂಡಳಿ ನಿರ್ಧರಿಸಿದೆ.























