ಬೆಂಗಳೂರು, ಅ.23 www.bengaluruwire.com : ನಾಗರಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ತ್ವರಿತ ಪರಿಹಾರ ಒದಗಿಸುವ ಮಹತ್ವದ ಕ್ರಮವಾಗಿ, ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರು ಪ್ರತಿ ಶುಕ್ರವಾರದಂತೆ ಈ ನಾಳೆಯು ಫೋನ್-ಇನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಜನಸಾಮಾನ್ಯರ ಅಹವಾಲುಗಳನ್ನು ನೇರವಾಗಿ ಆಲಿಸುವ ಮತ್ತು ಪರಿಹಾರ ನೀಡುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ.
ಕಾರ್ಯಕ್ರಮದ ವಿವರಗಳು:
ಈ ವಾರದ ಫೋನ್-ಇನ್ ಕಾರ್ಯಕ್ರಮವು ಅಕ್ಟೋಬರ್ 24 (ಶುಕ್ರವಾರ) ರಂದು ಬೆಳಿಗ್ಗೆ 7.00 ರಿಂದ 9.00 ಗಂಟೆಯವರೆಗೆ ನಡೆಯಲಿದೆ. ಉತ್ತರ ನಗರ ಪಾಲಿಕೆಯ ವ್ಯಾಪ್ತಿಯ ನಾಗರಿಕರು ಈ ಸಮಯದಲ್ಲಿ ಆಯುಕ್ತರೊಂದಿಗೆ ನೇರವಾಗಿ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರು ಪ್ರಮುಖವಾಗಿ ಎದುರಿಸುತ್ತಿರುವ ಈ ಕೆಳಕಂಡ ವಿಷಯಗಳ ಕುರಿತು ಅಹವಾಲುಗಳನ್ನು ಸಲ್ಲಿಸಬಹುದು:
* ರಸ್ತೆ ಗುಂಡಿಗಳು ಮತ್ತು ದುರಸ್ತಿ ಕಾರ್ಯಗಳು.
* ಬೀದಿ ದೀಪಗಳ ದೋಷಗಳು.
* ಕಸ ವಿಲೇವಾರಿ ಸಮಸ್ಯೆಗಳು ಮತ್ತು ಸೊಳ್ಳೆ ನಿಯಂತ್ರಣ.
* ಅಪಾಯಕರ ಮರ/ಕೊಂಬೆಗಳ ತೆರವು ಮತ್ತು ಬೀದಿ ನಾಯಿಗಳ ನಿಯಂತ್ರಣ.
* ಉದ್ಯಾನವನಗಳ ನಿರ್ವಹಣೆ, ಅನಧಿಕೃತ ಬ್ಯಾನರ್/ಪೋಸ್ಟರ್‌ಗಳ ತೆರವು.
* ಪಾದಚಾರಿ ಮಾರ್ಗದ ಒತ್ತುವರಿ ಮತ್ತು ಇ-ಖಾತಾ ಸಂಬಂಧಿತ ವಿಷಯಗಳು.
* ಚರಂಡಿ ಶುದ್ಧೀಕರಣ ಹಾಗೂ ಇತರೆ ನಾಗರಿಕ ಸೇವೆಗಳ ಸಮಸ್ಯೆಗಳು.
ನಾಗರೀಕರ ಅಹವಾಲು ಪರಿಹಾರಕ್ಕೆ ತಕ್ಷಣ ಕ್ರಮ:
ನಾಗರಿಕರಿಂದ ಸ್ವೀಕರಿಸಿದ ಪ್ರತಿ ಅಹವಾಲನ್ನು ತಕ್ಷಣವೇ ‘ಸಹಾಯ 2.0’ ಪೋರ್ಟಲ್‌ನಲ್ಲಿ ದಾಖಲಿಸಿ, ಸಂಬಂಧಿಸಿದ ಇಲಾಖೆಯ ಅಧಿಕಾರಿಗೆ ನಿಗದಿತ ಕಾಲಮಿತಿಯೊಳಗೆ ಪರಿಹಾರ ಒದಗಿಸಲು ನಿಯೋಜಿಸಲಾಗುತ್ತದೆ. ದೂರನ್ನು ಸಲ್ಲಿಸಿದ ನಾಗರಿಕರಿಗೆ SMS ಮೂಲಕ ದೂರು ಸ್ವೀಕೃತಿಯ ಮಾಹಿತಿ ಹಾಗೂ ಸಮಸ್ಯೆಯ ಪರಿಹಾರಕ್ಕೆ ನಿಯೋಜಿಸಲಾದ ಅಧಿಕಾರಿಯ ವಿವರಗಳನ್ನು ಕಳುಹಿಸಲಾಗುವುದು. ಇದು ಸಮಸ್ಯೆಯ ಟ್ರ್ಯಾಕಿಂಗ್‌ಗೆ (ಬಗೆಹರಿಸುವ ಹಂತಗಳ ಮೇಲ್ವಿಚಾರಣೆ) ಸಹಾಯಕವಾಗಲಿದೆ.
ನಾಗರಿಕರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಈ ಕೆಳಗಿನ ನಿಯಂತ್ರಣ ಕೊಠಡಿ ಸಂಪರ್ಕ ಸಂಖ್ಯೆಗಳನ್ನು ಬಳಸಬಹುದು:
* ಮೊಬೈಲ್ & ವಾಟ್ಸಪ್: 9480685705
* ಲ್ಯಾಂಡ್‌ಲೈನ್: 080-22975936 / 080-23636671
ಫೋನ್-ಇನ್ ಕಾರ್ಯಕ್ರಮದ ಜೊತೆಗೆ, ನಾಗರಿಕರು ‘ಸಹಾಯ ಆಪ್’ ಮುಖಾಂತರವೂ ತಮ್ಮ ಅಹವಾಲುಗಳನ್ನು ಯಾವುದೇ ಸಮಯದಲ್ಲಿ ದಾಖಲಿಸಬಹುದು ಎಂದು ಪಾಲಿಕೆ ಆಯುಕ್ತರ ಕಚೇರಿಯ ಪ್ರಕಟಣೆ ತಿಳಿಸಿದೆ. ಜನಪರ ಆಡಳಿತದತ್ತ ಇಟ್ಟ ಈ ಹೆಜ್ಜೆಯು ಉತ್ತರ ಬೆಂಗಳೂರು ನಾಗರಿಕರಿಗೆ ತ್ವರಿತ ಪರಿಹಾರ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.























