ಹಾಸನ: ಅ.21, www.bengaluruwire.com : ಭರದಿಂದ ಸಾಗುತ್ತಿರುವ ಹಾಸನಾಂಬ ಜಾತ್ರೆಯಲ್ಲಿ ಭಕ್ತರ ದಂಡು ದಾಖಲೆ ಬರೆದಿದೆ. ನಿನ್ನೆ (ಅ.20) ಒಂದೇ ದಿನ ಸುಮಾರು 2 ಲಕ್ಷ ಭಕ್ತರು ಹಾಸನಾಂಬ ದೇವಿಯ ದರ್ಶನ ಪಡೆದಿದ್ದಾರೆ.
ಪ್ರಸ್ತುತ ವರ್ಷದಲ್ಲಿ ಈವರೆಗೆ ಒಟ್ಟು 23 ಲಕ್ಷ ಜನರು ದರ್ಶನ ಪಡೆದಿದ್ದಾರೆ ಎಂದು ಕಂದಾಯ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಅವರು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷಕ್ಕಿಂತ ಭಾರೀ ಏರಿಕೆ:
ಕಳೆದ ವರ್ಷ ಒಟ್ಟಾರೆಯಾಗಿ 17,46,000 ಜನರು ದರ್ಶನ ಪಡೆದಿದ್ದರು. ಈ ವರ್ಷ ದರ್ಶನಕ್ಕೆ ಆಗಮಿಸಿದ ಭಕ್ತರ ಸಂಖ್ಯೆ ಕಳೆದ ವರ್ಷದ ಒಟ್ಟು ಸಂಖ್ಯೆಯನ್ನೂ ಮೀರಿದೆ.

ಪ್ರಸಕ್ತ ವರ್ಷದಲ್ಲಿ ₹ 300 ಮತ್ತು ₹ 1000 ಟಿಕೆಟ್ ಸಾಲಿನಲ್ಲಿ 3,40,260 ಜನರು ದರ್ಶನ ಪಡೆದಿದ್ದಾರೆ. ಕಳೆದ ವರ್ಷ ಇದೇ ಸಾಲಿನಲ್ಲಿ ಒಟ್ಟಾರೆ 1,29,956 ಜನ ದರ್ಶನ ಪಡೆದಿದ್ದರು. ಈ ಮೂಲಕ ವಿಶೇಷ ದರ್ಶನ ಪಡೆದ ಭಕ್ತರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ.
ಇಂದಿನ ದರ್ಶನ ಸಮಯ ಬದಲಾವಣೆ:
ಸಾರ್ವಜನಿಕರಿಗೆ ಇಂದು (ಅ.21, ಮಂಗಳವಾರ) ಮತ್ತು ನಾಳೆ (ಅ.22, ಬುಧವಾರ) ದರ್ಶನ ಲಭ್ಯವಿದೆ.
* ಇಂದು ಮಧ್ಯಾಹ್ನ 2 ರಿಂದ 3.30 ರವರೆಗೆ ದೇವಿಗೆ ನೈವೇದ್ಯ ಇರುವುದರಿಂದ ಈ ಸಮಯದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ.
* ಇಂದು (ಮಂಗಳವಾರ) ದರ್ಶನ ಸಾಲಿನ ಪ್ರವೇಶ ದ್ವಾರಗಳು ರಾತ್ರಿ 9 ಗಂಟೆಗೆ ಮುಚ್ಚಲ್ಪಡುತ್ತವೆ ಮತ್ತು ದರ್ಶನವು ಮಧ್ಯರಾತ್ರಿ 12 ಗಂಟೆಗೆ ನಿಲ್ಲುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ನಾಳೆಯ ದರ್ಶನ ವಿವರ:
* ಬುಧವಾರ (ಅ.22): ದರ್ಶನವು ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗಿ ಸಂಜೆ 7 ಗಂಟೆಯವರೆಗೆ ನಿರಂತರವಾಗಿ ಮುಂದುವರಿಯುತ್ತದೆ. ಸಾರ್ವಜನಿಕ ದರ್ಶನವು ಸಂಜೆ 7 ಗಂಟೆಗೆ ಮುಗಿಯುತ್ತದೆ. ಆ ನಂತರ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುವುದಿಲ್ಲ.
* ಗುರುವಾರ (ಅ.23): ಈ ದಿನ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದು ಕಂದಾಯ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಸ್ಪಷ್ಟಪಡಿಸಿದ್ದಾರೆ.
ದೇಗುಲದಲ್ಲಿ ದರ್ಶನವು ಬಹಳ ಸರಾಗವಾಗಿ ನಡೆಯುತ್ತಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.






















