ಬೆಂಗಳೂರು, ಅ.15 www.bengaluruwire.com : ನವೆಂಬರ್ 1 ರಿಂದ ಆರಂಭಗೊಂಡು 100 ದಿನಗಳ ಕಾಲ ಬಿ ಖಾತೆಗಳನ್ನು ಎ ಖಾತೆಗಳಾಗಿ ಪರಿವರ್ತನೆ ಮಾಡುವ ಐತಿಹಾಸಿಕ ‘ಎ ಖಾತಾ ಅಭಿಯಾನ’ಕ್ಕೆ ಸರ್ಕಾರ ತೀರ್ಮಾನಿಸಿದ್ದು, ಇದರಿಂದ ಬೆಂಗಳೂರಿನ ಸುಮಾರು 15 ಲಕ್ಷ ಆಸ್ತಿಗಳ ಮಾಲೀಕರಿಗೆ ಉಪಯೋಗವಾಗಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಮೊದಲ ಬಾರಿಗೆ ಏಕರೂಪ ಖಾತಾ ವ್ಯವಸ್ಥೆ ಜಾರಿಗೆ ತರುತ್ತಿದ್ದೇವೆ. ಜನರ ಆಸ್ತಿ ದಾಖಲೆಗಳ ರಕ್ಷಣೆಗಾಗಿ ಸರ್ಕಾರ ನೀಡುತ್ತಿರುವ ‘6ನೇ ಗ್ಯಾರಂಟಿ’ ಎಂದು ಡಿಸಿಎಂ ಶಿವಕುಮಾರ್ ಅವರು ವಿಧಾನಸೌಧದಲ್ಲಿ ನೂತನ ಆನ್‌ಲೈನ್ ವ್ಯವಸ್ಥೆಗೆ ಚಾಲನೆ ನೀಡಿ ಈ ವಿಷಯ ತಿಳಿಸಿದರು.
ಪ್ರಮುಖಾಂಶಗಳು:
* ದಿನಾಂಕ ಮತ್ತು ಅವಧಿ: ನವೆಂಬರ್ 1 ರಿಂದ ಪ್ರಾರಂಭವಾಗುವ ಈ ಅಭಿಯಾನ 100 ದಿನಗಳ ಕಾಲ ನಡೆಯಲಿದೆ.

* ವ್ಯಾಪ್ತಿ: 2,000 ಚದರ ಮೀಟರ್ ವಿಸ್ತೀರ್ಣದವರೆಗಿನ ಆಸ್ತಿಗಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರಲಿವೆ.
* ಅರ್ಜಿ ಮತ್ತು ಶುಲ್ಕ: ಆಸ್ತಿ ಮಾಲೀಕರು ₹500 ಅರ್ಜಿ ಶುಲ್ಕ ಕಟ್ಟಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಸಬೇಕು. ನಂತರ ಪಾಲಿಕೆ ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ಸೇವೆ ನೀಡುತ್ತಾರೆ.
* ಸರ್ಕಾರಕ್ಕೆ ಪಾವತಿ: ಮಾಲೀಕರು ಸದರಿ ಆಸ್ತಿಯ ಮಾರ್ಗದರ್ಶಿ ದರದ (ಗೈಡೆನ್ಸ್ ದರ) ಶೇ.5ರಷ್ಟನ್ನು ಶುಲ್ಕವಾಗಿ ಸರ್ಕಾರಕ್ಕೆ ಪಾವತಿಸಬೇಕು. 100 ದಿನಗಳ ನಂತರ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದು.
* ನೆರವು ಕೇಂದ್ರಗಳು: ಪ್ರತಿ ಪಾಲಿಕೆಯು ಎರಡೆರಡು ಸ್ಥಳಗಳಲ್ಲಿ ‘ಹೆಲ್ಪ್ ಡೆಸ್ಕ್’ (ಕಚೇರಿ)ಗಳನ್ನು ಮತ್ತು ಬೆಂಗಳೂರು ಒನ್ ಕೇಂದ್ರದಲ್ಲಿಯೂ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು.
ಕಟ್ಟಡ ಸಕ್ರಮಕ್ಕೆ ಕೈ ಹಾಕಿಲ್ಲ, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ:
ಈ ಅಭಿಯಾನವು ಮುಖ್ಯವಾಗಿ ಕಂದಾಯ ಜಮೀನಿನಲ್ಲಿರುವ ಬಿ-ಖಾತಾ ನಿವೇಶನಗಳನ್ನು ಎ-ಖಾತಾಗೆ ಪರಿವರ್ತಿಸುವ ಗುರಿ ಹೊಂದಿದೆ. ಇದರಿಂದ ನಿವೇಶನ ಮಾಲೀಕರಿಗೆ ಬ್ಯಾಂಕ್ ಸಾಲ ಮತ್ತು ಇತರೆ ಸೌಲಭ್ಯಗಳು ದೊರೆಯಲಿದ್ದು, ಸದ್ಯಕ್ಕೆ ಈ ನಿವೇಶನಗಳಲ್ಲಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು (OC/CC) ಸರ್ಕಾರ ಕೈ ಹಾಕುತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಅಕ್ರಮ ಆಸ್ತಿ ಮಾರಾಟ ಮತ್ತು ನಕಲಿ ಖಾತೆ ಸೃಷ್ಟಿಸುವುದನ್ನು ತಡೆಗಟ್ಟಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅರ್ಜಿ ಹಾಕಿದ ನಂತರ, ಪಾಲಿಕೆ ಅಧಿಕಾರಿಗಳು ಆಸ್ತಿಯ ಮುಂದೆ ಮಾಲೀಕರ ನಿಲ್ಲಿಸಿ ವಿಡಿಯೋ, ಫೋಟೋ ದಾಖಲೀಕರಣ ಮಾಡಿ ಅಪ್‌ಲೋಡ್ ಮಾಡಲಿದ್ದಾರೆ. ಸಾರ್ವಜನಿಕರು ಯಾರೂ ಸಹ ಲಂಚ ನೀಡುವಂತಿಲ್ಲ ಎಂದು ಅವರು ಎಚ್ಚರಿಸಿದರು.
ಡಿಜಿಟಲೀಕರಣಕ್ಕೆ ಪ್ರಶಸ್ತಿ:
ಆಸ್ತಿ ದಾಖಲೆಗಳ ಡಿಜಿಟಲೀಕರಣದ ಸರ್ಕಾರದ ಈ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಅಧಿಕಾರಿಗಳಿಗೆ ಪ್ರಶಸ್ತಿ ನೀಡಲಾಗಿದೆ. ಇದನ್ನು ಡಿಸಿಎಂ ಶಿವಕುಮಾರ್ ಪ್ರಸ್ತಾಪಿಸಿ, ಅಧಿಕಾರಿಗಳ ಶ್ರಮವನ್ನು ಶ್ಲಾಘಿಸಿದರು. ಬೆಂಗಳೂರಿನಲ್ಲಿ ಒಟ್ಟು 25 ಲಕ್ಷ ಆಸ್ತಿಗಳಿದ್ದು, ಈ ಪೈಕಿ 7.5 ಲಕ್ಷ ಎ ಖಾತೆಗಳು ಮತ್ತು 7.5 ಲಕ್ಷ ಬಿ ಖಾತೆಗಳನ್ನು ಹೊಂದಿವೆ ಎಂದರು.






















