ಬೆಂಗಳೂರು, ಅ.08 www.bengaluruwire.com : ದೇಶದ ಪ್ರತಿಷ್ಠಿತ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳಲ್ಲಿ ಒಂದಾದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ (Kidwai Memorial Institute of Oncology)ಯ ಸಂಪೂರ್ಣ ಜವಾಬ್ದಾರಿ ಮತ್ತು ಆಡಳಿತಾತ್ಮಕ ಅಧಿಕಾರವನ್ನು ಸಂಸ್ಥೆಯ ನಿರ್ದೇಶಕರಿಗೆ ಪುನಃ ಸ್ಥಾಪಿಸಿ ರಾಜ್ಯ ಸರ್ಕಾರ ಬುಧವಾರ ಮಹತ್ವದ ಆದೇಶ ಹೊರಡಿಸಿದೆ.
ಸಂಸ್ಥೆಯ ಆಡಳಿತಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಹಾಗೂ ಆರ್ಥಿಕ ಅವ್ಯವಹಾರಗಳ ತನಿಖಾ ವರದಿ ಆಧರಿಸಿ ಸರ್ಕಾರ ಈ ಕ್ರಮ ಕೈಗೊಂಡಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್ ಎಚ್ ಎಂ) ನಿರ್ದೇಶಕ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರು ಆಡಳಿತಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಡಾ.ಟಿ.ನವೀನ್ ಅವರು ಪ್ರಭಾರ ನಿರ್ದೇಶಕ ಹುದ್ದೆಯಲ್ಲಿದ್ದರು. ಹೀಗಾಗಿ ಇವರು ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಆದರೆ ಸರ್ಕಾರ ಹೊಸ ಆದೇಶದಿಂದಾಗಿ ಈಗ ಪೂರ್ಣ ಪ್ರಮಾಣದ ಅಧಿಕಾರ ಮರುಸ್ಥಾಪನೆಯಾದಂತಾಗಿದೆ.
ಹಿಂಪಡೆದ ಆಡಳಿತಾಧಿಕಾರಿ ಜವಾಬ್ದಾರಿ:
ಸಂಸ್ಥೆಯಲ್ಲಿ ಹಿಂದೆ ನಡೆದಿದ್ದ ಹಣಕಾಸು ಮತ್ತು ಆಡಳಿತಾತ್ಮಕ ಅಕ್ರಮಗಳ ಬಗ್ಗೆ ತನಿಖೆಗೆ ನೇಮಿಸಲಾಗಿದ್ದ ಸಮಿತಿಯ ಶಿಫಾರಸುಗಳನ್ನು ಪರಿಗಣಿಸಿ ಸರ್ಕಾರ ಈ ಬದಲಾವಣೆಗಳನ್ನು ಮಾಡಿದೆ. ಈ ಮೊದಲು ಆಡಳಿತಾಧಿಕಾರಿಗಳಾಗಿ ನೇಮಕಗೊಂಡಿದ್ದ ಅಧಿಕಾರಿಗೆ ನೀಡಲಾಗಿದ್ದ ಎಲ್ಲಾ ಜವಾಬ್ದಾರಿಗಳನ್ನು ತಕ್ಷಣವೇ ಹಿಂಪಡೆಯಲು ಸರ್ಕಾರ ಆದೇಶಿಸಿದೆ.

ನಿರ್ದೇಶಕರಿಗೆ ಪೂರ್ಣ ಪ್ರಮಾಣದ ಅಧಿಕಾರ:
ಆಡಳಿತಾತ್ಮಕ ವಿಷಯಗಳ ಸುಗಮ ನಿರ್ವಹಣೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ, ನಿರ್ದೇಶಕರಿಗೆ ಈ ಹಿಂದೆ ಇದ್ದಂತೆಯೇ ಪೂರ್ಣ ಜವಾಬ್ದಾರಿಯನ್ನು ಮರುಸ್ಥಾಪಿಸಲಾಗಿದೆ. ಇದರಲ್ಲಿ ಸಿಬ್ಬಂದಿ ಸೇವಾ ವಿಷಯಗಳು, ಹಣಕಾಸು ನಿರ್ವಹಣೆ, ಅಗತ್ಯ ಉಪಕರಣಗಳ ಸಂಗ್ರಹಣೆ ಹಾಗೂ ಖರೀದಿ ಪ್ರಕ್ರಿಯೆಗಳು, ಮಾನವ ಸಂಪನ್ಮೂಲ ನಿರ್ವಹಣೆ ಸೇರಿದಂತೆ ಎಲ್ಲಾ ಆಡಳಿತಾತ್ಮಕ ನಿರ್ಧಾರಗಳೂ ಸೇರಿವೆ. ಸರ್ಕಾರದ ಈ ನಿರ್ಧಾರದಿಂದ ಕಿದ್ವಾಯಿ ಸಂಸ್ಥೆಯ ದೈನಂದಿನ ಕಾರ್ಯಚಟುವಟಿಕೆಗಳು ಇನ್ನಷ್ಟು ಪಾರದರ್ಶಕವಾಗಿ ಮತ್ತು ತ್ವರಿತವಾಗಿ ನಡೆಯುವ ನಿರೀಕ್ಷೆ ಇದೆ.






















