ಬೆಂಗಳೂರು, ಅ.06 www.bengaluruwire.com : ನಾಡಿನ ಪ್ರಸಿದ್ಧ ಹಾಸನಾಂಬೆ ಉತ್ಸವಕ್ಕೆ ಈ ವರ್ಷದಿಂದ ಹೊಸ ಸ್ವರೂಪ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ದೀರ್ಘಕಾಲದಿಂದ ಟೀಕೆಗೆ ಗುರಿಯಾಗಿದ್ದ ವಿಐಪಿ ಸಂಸ್ಕೃತಿಗೆ ಬ್ರೇಕ್ ಹಾಕಿ, ಉತ್ಸವವನ್ನು ಸಂಪೂರ್ಣವಾಗಿ ಜನಸ್ನೇಹಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಘೋಷಿಸಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ಹಾಸನ ಜಿಲ್ಲೆಯ ಶಾಸಕರು, ಸಂಸದರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಐಪಿ ಸಂಸ್ಕೃತಿಯಿಂದ ಸ್ಥಳೀಯರು ಬೇಸತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದಿಂದ ಸಂಪೂರ್ಣವಾಗಿ ಅದನ್ನು ಕೈಬಿಡಲಾಗುವುದು. ಬದಲಾಗಿ, ಎಲ್ಲರಿಗೂ ಸುಗಮ ದರ್ಶನಕ್ಕೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

ಸೀಮಿತ ವಿಐಪಿ ಎಸ್ಕಾರ್ಟ್ ವ್ಯವಸ್ಥೆ :
ಕಳೆದ ವರ್ಷ ವಿಐಪಿಗಳ ಎಸ್ಕಾರ್ಟ್‌ಗಳಿಂದ ಭಾರಿ ಜನದಟ್ಟಣೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ, ಈ ವರ್ಷ ಎಸ್ಕಾರ್ಟ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಸೀಮಿತಗೊಳಿಸಲಾಗಿದೆ.

ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಮಾಜಿ ಪ್ರಧಾನಿಗಳಿಗೆ ಮಾತ್ರ ಎಸ್ಕಾರ್ಟ್ ಸೌಲಭ್ಯ ಒದಗಿಸಲಾಗುವುದು.
ಇತರೆ ಗಣ್ಯರಿಗೆ ಕಡ್ಡಾಯ ಪೂರ್ವ ಮಾಹಿತಿ:
* ಶಾಸಕರು, ಸಚಿವರು, ನ್ಯಾಯಾಧೀಶರು, ಕ್ರೀಡಾಪಟುಗಳು, ಸಿನಿಮಾ ತಾರೆಯರು ಸೇರಿದಂತೆ ಉಳಿದ ಗಣ್ಯ ವ್ಯಕ್ತಿಗಳು ದೇವಾಲಯಕ್ಕೆ ಭೇಟಿ ನೀಡುವ ಬಗ್ಗೆ ಇ-ಮೇಲ್ ಅಥವಾ ದೂರವಾಣಿ ಕರೆಗಳ ಮೂಲಕ ಮೊದಲೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು.
* ಮಾಹಿತಿ ನೀಡಿದ ಗಣ್ಯವ್ಯಕ್ತಿಗಳಿಗೆ ಜಿಲ್ಲಾಡಳಿತ ಏರ್ಪಡಿಸಿದ ವಾಹನದಲ್ಲಿ ದೇವಾಲಯಕ್ಕೆ ಕರೆತಂದು ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.
* ಗಣ್ಯರು ತಮ್ಮ ಕುಟುಂಬದ ನಾಲ್ಕು ಜನ ಸದಸ್ಯರನ್ನು ಜೊತೆಗೆ ಕರೆತರಲು ಅವಕಾಶವಿದ್ದು, ಖಾಸಗಿ ವಾಹನಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.
ಪಾಸ್ ವಿತರಣೆ ಮತ್ತು ಸಮಯ ನಿಗದಿ
ಭಕ್ತರ ಅನುಕೂಲಕ್ಕಾಗಿ ₹1000 ಮತ್ತು ₹300 ಬೆಲೆಯ ಪಾಸ್‌ಗಳನ್ನು ವಿತರಿಸಲಾಗುವುದು. ಪಾಸ್ ಪಡೆದವರಿಗೆ ದೇವರ ದರ್ಶನದ ಜೊತೆಗೆ ಪ್ರಸಾದವನ್ನೂ ನೀಡಲಾಗುವುದು.
* ಎಸ್ಕಾರ್ಟ್‌ನಲ್ಲಿ ಆಗಮಿಸುವವರಿಗೆ: ಬೆಳಗ್ಗೆ 10.30 ರಿಂದ 12.30ರ ವರೆಗೆ ದರ್ಶನಕ್ಕೆ ಅವಕಾಶ.
* ಪಾಸ್ ಪಡೆದವರಿಗೆ: ಬೆಳಗ್ಗೆ 7.30 ರಿಂದ 10.00ರ ನಡುವೆ ಪ್ರವೇಶ.
* ಪ್ರತಿದಿನ 1000 ಪಾಸ್‌ಗಳನ್ನು ಮಾತ್ರ ವಿತರಿಸಲಾಗುವುದು. ಸಮಯ ಮೀರಿ ಬರುವವರಿಗೆ ಅವಕಾಶ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಭಕ್ತರ ಸಂಖ್ಯೆಯಲ್ಲಿ ಭಾರೀ ಏರಿಕೆ :
ಹಾಸನಾಂಬೆ ದೇವಿಯ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, 2021 ರಲ್ಲಿ 1 ಲಕ್ಷ, 2022 ರಲ್ಲಿ 3 ಲಕ್ಷ, 2023 ರಲ್ಲಿ 6 ಲಕ್ಷ ಹಾಗೂ ಕಳೆದ ವರ್ಷ 20 ಲಕ್ಷ ಜನ ಭೇಟಿ ನೀಡಿದ್ದರು. ಈ ವರ್ಷ ಸುಮಾರು 25 ಲಕ್ಷ ಜನ ಆಗಮಿಸುವ ನಿರೀಕ್ಷೆ ಇರುವುದರಿಂದ ಸುಗಮ ದರ್ಶನಕ್ಕೆ ಜಿಲ್ಲಾಡಳಿತ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಸಮಗ್ರ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭದ್ರತೆಗೆ ಒತ್ತು :
ಈ ಬಾರಿ ಉತ್ಸವದ ಅವಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 9 ರಿಂದಲೇ ಕಾರ್ಯಕ್ರಮಗಳು ಆರಂಭವಾಗಲಿವೆ.
* ಮೂರು ವೇದಿಕೆ ಸಿದ್ಧಪಡಿಸಲಾಗಿದ್ದು, ಒಂದು ವೇದಿಕೆಯಲ್ಲಿ ಜಾನಪದ ಜಾತ್ರೆ ಆಯೋಜಿಸಲಾಗಿದೆ. ನಾಡಿನ ನಾನಾ ಭಾಗದ ಜಾನಪದ ಕಲಾವಿದರು ಭಾಗವಹಿಸಿ ಜಾನಪದವನ್ನು ಉಳಿಸಿ ಬೆಳೆಸುವ ಉದ್ದೇಶಕ್ಕೆ ಉತ್ತೇಜನ ನೀಡಲಿದ್ದಾರೆ. ಉಳಿದ ಎರಡು ವೇದಿಕೆಗಳಲ್ಲಿ ಸ್ಥಳೀಯ ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.
* ಇದಲ್ಲದೆ, ಟೆಲಿ ಟೂರಿಸಂ, ಫಲಪುಷ್ಪ ಪ್ರದರ್ಶನ, ಸ್ತ್ರೀ ಶಕ್ತಿ ಸಂಘಗಳಿಂದ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಏರ್ಪಡಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಹಾಸನಾಂಬೆ ಟೂರ್ ಪ್ಯಾಕೇಜ್ ಆರಂಭಿಸುವ ಇರಾದೆಯೂ ಇದೆ.
ಭಕ್ತರ ಅನುಕೂಲಕ್ಕಾಗಿ ಭದ್ರತಾ ವ್ಯವಸ್ಥೆ:
ಜನಸಂದಣಿ ನಿಯಂತ್ರಣಕ್ಕಾಗಿ 2000 ಪೊಲೀಸರ ನಿಯೋಜನೆ, 280ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಕೆ ಹಾಗೂ ಡ್ರೋನ್ ಕ್ಯಾಮೆರಾ ಬಳಕೆ ಮಾಡಲಾಗಿದ್ದು, ಎಲ್ಲದಕ್ಕೂ ಎಐ ತಂತ್ರಜ್ಞಾನದ ನೆರವು ಪಡೆಯಲಾಗಿದೆ. ಸ್ಥಳದಲ್ಲೇ ಕಂಟ್ರೋಲ್ ರೂಂ ನಿರ್ಮಿಸಿ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಸಚಿವರು ಭದ್ರತಾ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು.






















