ಮೈಸೂರು, ಸೆ.29 www.bengaluruwire.com: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2025ರ ಸಾಂಸ್ಕೃತಿಕ ಕಣದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ಗಾಯಕ, ಮೈಸೂರಿನ ವರಪುತ್ರ ವಿಜಯ್ ಪ್ರಕಾಶ್ ಅವರ ಸುಮಧುರ ಗಾಯನವು ನೆರೆದಿದ್ದ ಸಹಸ್ರಾರು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ಭಾನುವಾರ, ಏಳನೇ ದಿನದ ಸಂಭ್ರಮದಲ್ಲಿ ಅರಮನೆ ಆವರಣದ ವೇದಿಕೆಯಲ್ಲಿ ಜರುಗಿದ ಅವರ ಸಂಗೀತ ಕಾರ್ಯಕ್ರಮವು ರಸಸಂಜೆಗೇ ಸಾಕ್ಷಿಯಾಯಿತು.
ಭಾವನಾತ್ಮಕ ಕ್ಷಣ: ಪುನೀತ್ ಸ್ಮರಣೆ :
ವಿಜಯ್ ಪ್ರಕಾಶ್ ಅವರು ತಮ್ಮ ಗಾಯನವನ್ನು ಚಾಮುಂಡೇಶ್ವರಿ ಶಂಕರಿ ಕೀರ್ತನೆಯೊಂದಿಗೆ ಪ್ರಾರಂಭಿಸಿ, ಹಂಸಲೇಖ ಅವರ ರಚನೆಯ “ಹಬ್ಬ ಹಬ್ಬ ಇದು ಕರಡುನಾಡ ಮನೆ ಮನೆ ಹಬ್ಬ… ಇದು ಚಾಮುಂಡಿ ತಾಯಿ ತವರ ಹಬ್ಬ” ಹಾಡಿನೊಂದಿಗೆ ದಸರಾ ಸಂಭ್ರಮಕ್ಕೆ ಇಂಬು ಕೊಟ್ಟರು. ಆದರೆ ಕಾರ್ಯಕ್ರಮದ ಹೈಲೈಟ್ ಆಗಿದ್ದು, ದಿ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿದ ಕ್ಷಣ.

ವಿಜಯ್ ಪ್ರಕಾಶ್ “ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜ ಕುಮಾರ…” ಹಾಡನ್ನು ಹಾಡುತ್ತಿದ್ದಂತೆ, ನೆರೆದಿದ್ದ ಪ್ರೇಕ್ಷಕರೆಲ್ಲರೂ ತಮ್ಮ ಮೊಬೈಲ್ ಕ್ಯಾಮರಾ ಟಾರ್ಚ್ ಆನ್ ಮಾಡಿ, ಬೆಳಕು ಬೀಸುತ್ತಾ, ಗಾಯಕನ ಧ್ವನಿಗೆ ಧ್ವನಿಗೂಡಿಸಿದರು. ಈ ಹಾಡಿನೊಂದಿಗೆ ಪುನೀತ್ ಅವರನ್ನು ನೆನೆದು ಅಭಿಮಾನಿಗಳು ಭಾವುಕರಾದರು.
ಹಿಟ್ ಹಾಡುಗಳ ಸುರಿಮಳೆ ಮತ್ತು ಶಾಸ್ತ್ರೀಯ ರಾಗದ ಸೊಬಗು :
ತಮ್ಮ ಹಿಟ್ ಹಾಡುಗಳಾದ “ಹಲ್ಲೊ ಹಲ್ಲೊ ಹಲ್ಲೋ… ನನ್ನ ಮನಸ್ಸು ಇಲ್ಲೆ ಎಲ್ಲೋ…”, “ಒಪನ್ ಹೇರ್ ಬಿಟ್ಕೊಂಡು ಕೂದಲು ಹಾರಾಡ್ಸ್ಕೊಂಡು”, “ಸಿಂಗಾರ ಸಿರಿಯೇ..” ಮತ್ತು “ಬೆಳಗೆದ್ದು ಯಾರ ಮುಖವ ನಾನು ನೋಡಿದೆ” ಗೀತೆಗಳ ಮೂಲಕ ಪ್ರೇಕ್ಷಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು. ಗಾಯಕರಾದ ಪೃಥ್ವಿ ಭಟ್, ಶಾಶ್ವತಿ ಕಷ್ಯಪ್ ಮತ್ತು ಅಖಿಲ ಅವರು “ಸೂಜುಗಾದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ” ಹಾಡನ್ನು ಹಾಡಿ ಮನಗೆದ್ದರು.
ವಿಜಯ್ ಪ್ರಕಾಶ್ ಅವರ ಮತ್ತೊಂದು ವಿಶೇಷ ಕೊಡುಗೆ ಶಿವ ಸ್ತುತಿ. “ಓಂ ಶಿವೋಂ ಹಂ.. ಒಂ ನಮಃ ಶಿವಾಯ” ಎಂದು ಶಿವನ ಜಪವನ್ನು ಸ್ವರ ಸಲ್ಲಾಪಗಳೊಂದಿಗೆ ಹಾಡಿದಾಗ, ನೆರೆದಿದ್ದವರೆಲ್ಲರೂ ಕ್ಷಣಕಾಲ ಶಿವನ ಧ್ಯಾನದಲ್ಲಿ ಮುಳುಗಿದ ಅನುಭವ ನೀಡಿತು.
ಅವರು ಕಾಪಿ, ಕಲ್ಯಾಣಿ, ದಾನಿ ರಾಗಗಳಲ್ಲಿ ಹಳೆಯ ಹಾಗೂ ಹೊಸ ಗೀತೆಗಳ ಸಮ್ಮಿಲನ ಮಾಡಿದರು. ಡಾ. ರಾಜ್‌ಕುಮಾರ್ ಅವರ “ಕೋಗಿಲೆ ಹಾಡಿದೆ ಕೇಳಿದೆಯ…”, “ರೋಜಾ ರೋಜಾ ಹೂವೇ ಎಲ್ಲೆ ನೀ ಎಲ್ಲೆ…”, “ನಗುವ ನಯನ ಮಧುರ ಮೌನ” ಮತ್ತು “ನಿನ್ನಿಂದಲೇ ನಿನ್ನಿಂದಲೆ ಕನಸೊಂದು ಶುರುವಾಗಿದೆ”ಯಂತಹ ಸುಮಧುರ ಹಾಡುಗಳನ್ನು ಉಣಬಡಿಸಿದರು.
ಚಲನಚಿತ್ರ ಗೀತೆಗಳ ಪ್ರದರ್ಶನ :
“ಕಾಲವನ್ನು ತಡೆಯೊರು ಯಾರು ಇಲ್ಲ…” (ಆಪ್ತಮಿತ್ರ), “ಏನಮ್ಮಿ…. ಏನಮ್ಮಿ ಯಾರಮ್ಮಿ ನೀನಮ್ಮಿ” (ಅಯೋಗ್ಯ), “ಸಾಲುತ್ತಿಲ್ಲವೆ ಸಾಲುತ್ತಿಲ್ಲವೆ….” (ಕೋಟಿಗೊಬ್ಬ-2), “ಪ್ರೀತಿ ಹಂಚುವ ಯಜಮಾನ”, “ಸಂತೋಷಕ್ಕೆ ಹಾಡು ಸಂತೋಷಕ್ಕೆ…”, “ಒಹೋ ಬಂತು ಶ್ರಾವಣ” ಹಾಗೂ “ಬೈದು ಬುದ್ಧಿ ಹೇಳು ಬದ್ರರ್ ಫ್ರಮ್ ಅನದರ್ ಮದರ್” ಹಾಡುಗಳು ಪ್ರೇಕ್ಷಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದವು. ಕಾರ್ಯಕ್ರಮದ ಕೊನೆಯಲ್ಲಿ ಪೊಲೀಸರಿಗೆ “ಜೈಹೊ.. ಜೈಹೊ…” ಹಾಡನ್ನು ಸಮರ್ಪಿಸಲಾಯಿತು.
ಇದಕ್ಕೂ ಮೊದಲು, ಬೆಂಗಳೂರಿನ ಭೂತಾಯಿ ಬಳಗದಿಂದ ಪರಿವರ್ತನಾ ತತ್ವ ಪದಗಳ ಪ್ರದರ್ಶನ ಮತ್ತು ಅಂತರರಾಷ್ಟ್ರೀಯ ಖ್ಯಾತ ಕಲಾವಿದರಿಂದ ಕುಚುಪುಡಿ ನೃತ್ಯ ಎಲ್ಲರ ಗಮನ ಸೆಳೆಯಿತು.























