ಮೈಸೂರು, ಸೆ. 27 www.bengaluruwire.com: ಮೈಸೂರು ರೈತ ದಸರಾ ಮಹೋತ್ಸವ-2025ರ ಅಂಗವಾಗಿ ನಡೆದ ಶ್ವಾನ ಮತ್ತು ಮುದ್ದು ಪ್ರಾಣಿಗಳ ಪ್ರದರ್ಶನ ಹಾಗೂ ಸ್ಪರ್ಧೆ ನೋಡುಗರ ಮನಸೂರೆಗೊಂಡಿತು. ಸ್ಪರ್ಧೆಯಲ್ಲಿ ಜರ್ಮನ್ ಶಫರ್ಡ್ ತಳಿಯ ಮೈಸೂರು ಶ್ವಾನಕ್ಕೆ ಮೊದಲ ಸ್ಥಾನ ದೊರೆಯಿತು.
ರಾಜ್ಯ ಪಶುಸಂಗೋಪನೆ ಇಲಾಖೆಯ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಈ ಸ್ಪರ್ಧೆಯಲ್ಲಿ ಮೈಸೂರು, ಮಂಡ್ಯ, ಬೆಂಗಳೂರು, ಹೊರ ರಾಜ್ಯ ಕೇರಳ ಹಾಗೂ ಊಟಿ ಸೇರಿದಂತೆ ವಿವಿಧ ಭಾಗಗಳಿಂದ ಒಟ್ಟು 640 ಶ್ವಾನಗಳು ನೋಂದಣಿಯಾಗಿದ್ದವು. ಸೈಬಿರಿಯಾ ಹಷ್ಕಿ, ಜರ್ಮನ್ ಶಫರ್ಡ್ , ಮುಧೋಳ ಹಾಗೂ ಪಾರಿನ್ ನ ಒಟ್ಟು 51 ತಳಿಯ ಶ್ವಾನಗಳು ಸ್ಪರ್ಧೆಯಲ್ಲಿ ಪಾಲ್ಲೊಂಡಿದ್ದವು ಅಂತಿಮವಾಗಿ 7 ತಳಿಗಳು ಜಯಶೀಲ ಆದವು ಅವುಗಳ ಮಾಲೀಕರಿಗೆ ಪ್ರಮಾಣ ಪತ್ರ ಹಾಗೂ ಆಕರ್ಷಕ ಟ್ರೋಪಿಯನ್ನು ನೀಡಲಾಯಿತು.
ತಳಿಗಳ ಮಹಾಪೂರ: ಅಪರೂಪದ ನಾಯಿಗಳ ದರ್ಶನ :

ಸ್ಪರ್ಧೆಯಲ್ಲಿ ಪ್ರತಿ ತಳಿಯಲ್ಲಿ ಪಪ್ಪಿ (ಮರಿ ನಾಯಿ), ವಯಸ್ಕ ಗಂಡು ಮತ್ತು ಹೆಣ್ಣು ನಾಯಿ ಎಂಬ ಮೂರು ವಿಭಾಗಗಳಿದ್ದು, ಪ್ರತಿ ವಿಭಾಗದಲ್ಲೂ ತಲಾ ಎರಡು ಬಹುಮಾನ ನೀಡಲಾಯಿತು. ಶ್ವಾನಗಳ ತಳಿ ಗುಣಲಕ್ಷಣ, ಬಣ್ಣ, ನಡಿಗೆ, ಆರೋಗ್ಯ ಮತ್ತು ಮಾಲೀಕರಿಗೆ ತೋರುವ ವಿಧೇಯತೆಯನ್ನು ಮಾನದಂಡವಾಗಿರಿಸಿ ಪ್ರಶಸ್ತಿಗಳನ್ನು ಘೋಷಿಸಲಾಯಿತು.


ಜರ್ಮನ್ ಶಫರ್ಡ್ ತಳಿಗೆ ಮೊದಲ, ಬಾಕ್ಸರ್ ತಳಿಗೆ ದ್ವೀತೀಯ, ರಾಟ್ ವಲರ್ ತಳಿಗೆ ಮೂರನೇ, ಡಾಬರ್ ವೆಲಸ್ ನಾಲ್ಕನೆ, ಮಾಲ್ವಿಸ್ ತಳಿಗೆ ಐದನೇ, ಮುಧೋಳ್ ತಳಿಗೆ ಆರನೇ ಹಾಗೂ ಸೈಬೇರಿಯನ್ ಹಸ್ಕಿ ತಳಿಗೆ ಏಳನೇ ಸ್ಥಾನ ದೊರೆಯಿತು.

ವಿಶೇಷ ತಳಿಗಳ ಶ್ವಾನಗಳು ಸ್ಪರ್ಧೆಯಲ್ಲಿ ಭಾಗಿ :

ಈ ಬಾರಿಯ ಪ್ರದರ್ಶನದಲ್ಲಿ ಡಚ್ ಶಫರ್ಡ್, ಸೌತ್ ಆಫ್ರಿಕಾ ಮಾಸ್ಟಿಫ್, ಚೌಚೌ, ಬಾರ್ಡರ್ ಕೂಲಿ, ಓಲ್ಡ್ ಶೀಪ್ ಡಾಗ್, ಬೆಲ್ಜಿಯಂ ಮೆಲೊನಿಸ್, ಬೆಲ್ಜಿಯಂ ಶಫರ್ಡ್ ಮತ್ತು ಕೋಕಾಪೂನಂತಹ ಅಪರೂಪದ ತಳಿಗಳು ಗಮನ ಸೆಳೆದವು. ಈ ಕುರಿತು ಮಾಹಿತಿ ನೀಡಿದ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ರಾಮು, “ವಿವಿಧ ತಳಿಗಳ ಪ್ರದರ್ಶನ ಶ್ವಾನ ಪ್ರೇಮಿಗಳಿಗೆ ಹಬ್ಬದಂತಿತ್ತು” ಎಂದು ಹರ್ಷ ವ್ಯಕ್ತಪಡಿಸಿದರು.
ಯೋಧ ಶ್ವಾನಗಳ ವೇಗದ ಗುಟ್ಟು :
ಭಾಗವಹಿಸಿದ ತಳಿಗಳ ಪೈಕಿ ಬೆಲ್ಜಿಯಂ ಮೆಲೊನಿಸ್ ಮತ್ತು ಬೆಲ್ಜಿಯಂ ಶಫರ್ಡ್ ತಳಿಗಳು ಪ್ರಮುಖ ಆಕರ್ಷಣೆಯಾಗಿದ್ದವು. “ಬೆಲ್ಜಿಯಂ ಮೆಲೊನಿಸ್ ತಳಿಯ ನಾಯಿಯ ವೇಗವು ವಿಶ್ವದಲ್ಲೇ ಅತಿ ಹೆಚ್ಚು. ಇವು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಉಗ್ರಗಾಮಿಗಳ ಪತ್ತೆ ಮತ್ತು ಮಿಲಿಟರಿ ಆಪರೇಷನ್‌ಗಳಲ್ಲಿ ಬಳಕೆಯಾಗುತ್ತವೆ” ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಬಸವರಾಜು ವಿವರಿಸಿದರು. ಬೆಲ್ಜಿಯಂ ಶಫರ್ಡ್ ತಳಿಯು ಕೂಡ ಉತ್ತಮ ವಾಸನೆ ಗ್ರಹಿಕೆ ಮತ್ತು ವೇಗದ ಓಟದಿಂದಾಗಿ ಅಪರಾಧ ತನಿಖೆ ಹಾಗೂ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ದೇಶಿ ಹೆಮ್ಮೆ: ಮುಧೋಳ ತಳಿಯ ನಡಿಗೆ :
ಭಾರತೀಯ ತಳಿಯಾದ ಮುಧೋಳ ನಾಯಿಯೂ ಸ್ಪರ್ಧೆಯಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆಯಿತು. ಈ ತಳಿಯನ್ನು ರಾಜ್ಯದಲ್ಲಿ ಮಹಾರಾಜರು ಬೇಟೆಗಾಗಿ ಬಳಸುತ್ತಿದ್ದರು. ಇದೀಗ ಇದನ್ನು ರಕ್ಷಣಾ ಇಲಾಖೆಯಲ್ಲಿ ತರಬೇತಿ ನೀಡಿ ಬಳಸುತ್ತಿರುವುದು ಹೆಮ್ಮೆಯ ವಿಷಯ ಎಂದು ಡಾ. ಬಸವರಾಜು ಹೇಳಿದರು.
ವಿಶೇಷ ಪ್ರದರ್ಶನದಲ್ಲಿ ಮೈಸೂರು ಪೊಲೀಸ್ ಇಲಾಖೆಯ ಶ್ವಾನ ವಿಭಾಗದ ಐದು ತರಬೇತಿಗೊಂಡ ನಾಯಿಗಳು ತಮ್ಮ ಚಾಣಾಕ್ಷತನ ಹಾಗೂ ಪೊಲೀಸರ ಸೂಚನೆಗೆ ತಕ್ಕಂತೆ ಭಂಗಿಗಳನ್ನು ಪ್ರದರ್ಶಿಸಿ ನೆರೆದಿದ್ದವರ ಚಪ್ಪಾಳೆಗೆ ಪಾತ್ರವಾದವು.

ಇದೇ ವೇಳೆ, ಪೊಲೀಸ್ ಇಲಾಖೆಯ ಶ್ವಾನ ವಿಭಾಗದ ಹೆಡ್ ಕಾನ್ಸ್‌ಟೇಬಲ್ ಮಂಜುನಾಥ ಅವರು ತರಬೇತಿಗೊಳಿಸಿದ ವಿಶೇಷ ಶ್ವಾನ ‘ಯೋಧ’ನ ಬಗ್ಗೆ ಮಾಹಿತಿ ನೀಡಿದರು. ಬೆಲ್ಜಿಯಂ ಷಪರ್ಡ್ ತಳಿಯ ಈ ಐದು ವರ್ಷದ ನಾಯಿಯು ಕೇವಲ ಆರು ತಿಂಗಳ ತರಬೇತಿಯಲ್ಲಿ ನುರಿತಿದೆ. “ಈ ನಾಯಿಯ ಕಣ್ಣಿಗೆ ಬಟ್ಟೆ ಕಟ್ಟಿದರೂ ಬಾಂಬ್ ಪತ್ತೆ ಮಾಡುವ ಚಾಣಾಕ್ಷತೆ ಹೊಂದಿದೆ. ಕಳೆದ ವರ್ಷ ದಕ್ಷಿಣ ಭಾರತದಲ್ಲಿ ನಡೆದ ಪೊಲೀಸ್ ಮೀಟ್‌ನ ಸದರನ್ ರೇಂಜ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾನೆ” ಎಂದರು.
ಒಟ್ಟಾರೆಯಾಗಿ, ಈ ಬಾರಿಯ ಶ್ವಾನ ಪ್ರದರ್ಶನವು ಕೇವಲ ಸ್ಪರ್ಧೆಗಿಂತ ಹೆಚ್ಚಾಗಿ, ಶ್ವಾನ ತಳಿಗಳ ವೈವಿಧ್ಯತೆ ಮತ್ತು ಅವುಗಳ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು.























