ಬೆಂಗಳೂರು, ಸೆ.20 www.bengaluruwire.com : ರಾಜ್ಯ ಸರ್ಕಾರದ ಬಹುನಿರೀಕ್ಷಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ಅಧಿಕೃತವಾಗಿ ಮುದ್ರೆಯೊತ್ತಲಾಗಿದ್ದು, ಸಮೀಕ್ಷೆ ಕಾರ್ಯ ನಡೆಸುವಂತೆ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗಕ್ಕೆ ಆದೇಶಿಸಿದೆ.
ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿಗಳು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. 2015 ರಲ್ಲಿಯೇ ಪೂರ್ಣಗೊಂಡಿದ್ದ ಈ ಸಮೀಕ್ಷಾ ವರದಿ ಬಹು ಕಾರಣಗಳಿಂದ ಸರ್ಕಾರಕ್ಕೆ ಸಲ್ಲಿಕೆಯಾಗಿರಲಿಲ್ಲ. ಪ್ರಸ್ತುತ ಈ ಕುರಿತು ಗಹನವಾದ ಚರ್ಚೆಗಳು ನಡೆಯುತ್ತಿದ್ದಂತೆಯೇ ರಾಜ್ಯ ಸರ್ಕಾರ ಜಾತಿ ಸಮೀಕ್ಷೆ ವಿಷಯದಲ್ಲಿ ನಿರ್ಣಾಯಕ ಹೆಜ್ಜೆಯನ್ನಿಟ್ಟಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಅನ್ನು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರ ವರೆಗೆ ರಾಜ್ಯದಾದ್ಯಂತ ನಡೆಸಲಾಗುತ್ತಿದೆ.
ರಾಜ್ಯ ಸರ್ಕಾರದ ನಿರ್ಧಾರದ ಕುರಿತು ಹಿಂದುಳಿದ ವರ್ಗಗಳ ಆಯೋಗದ ಸದಸ್ಯರು ಈ ಕುರಿತು ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಿದ್ದರು. ಅದರಂತೆ ಸರ್ಕಾರ ಇದೀಗ ಅಧಿಕೃತ ಆದೇಶ ನೀಡಿದೆ. ಸಮೀಕ್ಷೆ ಕಾರ್ಯ ನಡೆಸಲು ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡುವುದಾಗಿ ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಿದೆ.
ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಬಹು ವರ್ಷಗಳಿಂದ ಕಾಯುತ್ತಿದ್ದ ಸಮೀಕ್ಷಾ ವರದಿಯ ಕಾರ್ಯಕ್ಕೆ ಮತ್ತಷ್ಟು ವೇಗ ಸಿಕ್ಕಿದಂತಾಗಿದೆ. ಈ ವರದಿಯು ರಾಜ್ಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಕುರಿತು ನಿಖರವಾದ ಚಿತ್ರಣ ನೀಡುವ ನಿರೀಕ್ಷೆ ಇದೆ. ಆ ಮೂಲಕ ರಾಜ್ಯದ ಅಭಿವೃದ್ಧಿ ನೀತಿ ನಿರೂಪಣೆಯಲ್ಲಿ ಜಾತಿ ಸಮೀಕ್ಷೆ ವರದಿ ಮಹತ್ವದ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ. ಈ ವರದಿ ಸಂಪೂರ್ಣಗೊಂಡ ಬಳಿಕ ರಾಜ್ಯದ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ನಿರ್ದಿಷ್ಟ ಯೋಜನೆಗಳನ್ನು ರೂಪಿಸಲು ಸರ್ಕಾರಕ್ಕೆ ಸಹಕಾರಿಯಾಗಲಿದೆ.
























