ಬೆಂಗಳೂರು, ಸೆ.19 www.bengaluruwire.com : ಕೇಂದ್ರ ಸರ್ಕಾರವು ಹಾಲಿನ ಉತ್ಪನ್ನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಶೇ. 12ರಿಂದ 5ಕ್ಕೆ ಇಳಿಕೆ ಮಾಡಿದೆ. ಈ ನಿರ್ಧಾರದಿಂದ ನಂದಿನಿ ಸಂಸ್ಥೆಯ ಹಲವು ಉತ್ಪನ್ನಗಳ ಬೆಲೆ ಕಡಿಮೆಯಾಗಲಿದೆ.
ಪರಿಷ್ಕೃತ ದರಗಳು ಸೆಪ್ಟೆಂಬರ್ 22ರಿಂದಲೇ ಜಾರಿಗೆ ಬರಲಿವೆ ಎಂದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ತಿಳಿಸಿದೆ. ಈ ಜಿಎಸ್‌ಟಿ ಕಡಿತವು ತುಪ್ಪ, ಬೆಣ್ಣೆ, ಚೀಸ್, ಮತ್ತು ಪನ್ನೀರ್‌ನಂತಹ ಉತ್ಪನ್ನಗಳ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಈ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರವು ಶೇ. 12 ರಿಂದ ಶೇ. 5ಕ್ಕೆ ಇಳಿಕೆಯಾಗಿರುವುದರಿಂದ ಗ್ರಾಹಕರಿಗೆ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬರಲಿದೆ. ಈ ಹಿಂದೆ ಪನ್ನೀರ್ ಮತ್ತು ಗುಡ್ ಲೈಫ್ ಹಾಲಿಗೆ ಶೇ. 5ರಷ್ಟು ಜಿಎಸ್‌ಟಿ ಇದ್ದು, ಈಗ ಅವುಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಗ್ರಾಹಕರಿಗೆ ಹೊರೆ ಇಳಿಕೆ :
ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು 2017ರಲ್ಲಿ ಜಾರಿಗೊಳಿಸಲಾಗಿತ್ತು. ನಂತರ 2022ರಲ್ಲಿ ಇದನ್ನು ಶೇ. 12ಕ್ಕೆ ಹೆಚ್ಚಿಸಲಾಗಿತ್ತು. ಈಗ ತೆರಿಗೆ ದರವನ್ನು ಕಡಿಮೆ ಮಾಡಿರುವುದರಿಂದ ಗ್ರಾಹಕರ ಮೇಲಿನ ಆರ್ಥಿಕ ಹೊರೆ ಸ್ವಲ್ಪಮಟ್ಟಿಗೆ ಕಡಿಮೆಯಾಗಲಿದೆ. ಕೆಎಂಎಫ್‌ನ ಹಿರಿಯ ಅಧಿಕಾರಿಗಳು ಈ ಕುರಿತು ಸಭೆ ನಡೆಸಿ, ದರ ಕಡಿತಕ್ಕೆ ಅಂತಿಮ ಆದೇಶ ಹೊರಡಿಸಲು ನಿರ್ಧರಿಸಿದ್ದಾರೆ.

ಕೇಂದ್ರ ಸರ್ಕಾರದ ಈ ನಿರ್ಧಾರವು ಗ್ರಾಹಕರಿಗೆ ಹಬ್ಬದ ಕೊಡುಗೆಯಂತೆ ಪರಿಣಮಿಸಿದೆ. ಪರಿಷ್ಕೃತ ದರಗಳು ಜಾರಿಗೆ ಬಂದ ನಂತರ ನಂದಿನಿ ಉತ್ಪನ್ನಗಳ ಮಾರಾಟ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಏನಂತಾರೆ?:
“ಮೊಸರಲ್ಲಿ ಈಗಾಗಲೇ ಶೇ.5ರಷ್ಟು ಜಿಎಸ್‌ಟಿ ಇದೆ, ಹಾಲಿಗೆ ಜಿಎಸ್‌ಟಿ ಇಲ್ಲ. ಹಾಗಾಗಿ ಇವೆರಡರ ದರ ಬದಲಾವಣೆಯಿಲ್ಲ. ಬಾಕಿ ಉತ್ಪನ್ನ ಜಿಎಸ್‌ಟಿ ಕಡಿಮೆಯಾಗಲಿದೆ. ಸೆ.22ರಿಂದ ನಂದಿನಿ ಉತ್ಪನ್ನಗಳ ದರ ಕಡಿಮೆಯಾಗಲಿದೆ. ಈ ಸಂಬಂಧ ಉತ್ಪನ್ನಗಳ ದರಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ನಿನ್ನೆ ವಾಣಿಜ್ಯ ತೆರಿಗೆ ಅಧಿಕಾರಿಗಳ ಜೊತೆ ಕೆಎಂಎಫ್ ಅಧಿಕಾರಿಗಳು ಚರ್ಚೆ ನಡೆಸಿದ್ದೇವೆ.”
– ಬಿ.ಶಿವಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ, ಕೆಎಂಎಫ್























