ಬೆಂಗಳೂರು, ಸೆ.19 www.bengaluruwire.com : ರಾಜ್ಯದಲ್ಲಿನ ರಸ್ತೆ ಗುಂಡಿಗಳ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿದ ಆರೋಪಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಇಬ್ಬರ ನಡುವೆ ಟ್ವೀಟ್ ವಾರ್ ಶುರುವಾಗಿದೆ. ಇದಕ್ಕೆ ಜೆಡಿಎಸ್ ಅಧಿಕೃತ ಎಕ್ಸ್ (X) ಖಾತೆಯಿಂದ ಖಾರವಾದ ತಿರುಗೇಟು ನೀಡಲಾಗಿದ್ದು, ಬೆಂಗಳೂರಿನ ಮೂಲಸೌಕರ್ಯದ ಬಗ್ಗೆ ರಾಜಕೀಯ ಜಟಾಪಟಿ ತಾರಕಕ್ಕೇರಿದೆ.
ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ರಸ್ತೆ ಗುಂಡಿಗಳಿಂದಾಗಿ ರಾಜ್ಯದಲ್ಲಿ ಐಟಿ ಮತ್ತು ಸ್ಟಾರ್ಟ್ ಅಪ್ ಕಂಪನಿಗಳು ದೂರವಾಗುತ್ತಿವೆ ಎಂದು ಆರೋಪಿಸಿದ್ದರು. ಇದಕ್ಕೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್, “ಸಂಸದರಾಗಿ ಮತ್ತು ಕೇಂದ್ರ ಸಚಿವರಾಗಿ ಬೆಂಗಳೂರಿಗೆ ನಿಮ್ಮ ಕೊಡುಗೆ ಏನು? ಯುಪಿಎ ಸರ್ಕಾರದಲ್ಲಿ ನೆಹರೂ ಹೆಸರಿನಲ್ಲಿ ಜೆಎನ್‌ಯುಆರ್‌ಎಂ ಯೋಜನೆಯಡಿ ಅನೇಕ ಅನುದಾನಗಳನ್ನು ನೀಡಲಾಗಿತ್ತು. ಅದೇ ರೀತಿ ನೀವು ಪ್ರಧಾನಮಂತ್ರಿಯ ಬಲಗೈ ಆಗಿರುವ ಕಾರಣ ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ ₹10,000 ಕೋಟಿ ವಿಶೇಷ ಅನುದಾನ ಕೊಡಿಸಿ,” ಎಂದು ಸವಾಲು ಹಾಕಿದರು.
ಅಲ್ಲದೆ, “ಮೇಕೆದಾಟು ಯೋಜನೆಗೆ ಐದೇ ನಿಮಿಷದಲ್ಲಿ ಅನುಮತಿ ಕೊಡಿಸುತ್ತೇನೆ ಎಂದಿದ್ದೀರಿ, ಏಕೆ ಕೊಟ್ಟಿಲ್ಲ? ಮಹದಾಯಿ ಯೋಜನೆಗೆ ಅನುಮತಿ ಏಕೆ ಕೊಡಿಸಿಲ್ಲ? ರೈತರ ಮಕ್ಕಳು ಎಂದು ಹೇಳಿಕೊಳ್ಳುವ ನೀವು ಯುಕೆಪಿ ಯೋಜನೆ ವಿರುದ್ಧ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ ಎಂದಿರುವಾಗ ಏಕೆ ಧ್ವನಿ ಎತ್ತುತ್ತಿಲ್ಲ? ಕೇವಲ ಮಾಧ್ಯಮಗಳಲ್ಲಿ ಹೇಳಿಕೆ ನೀಡಿ, ಟ್ವೀಟ್ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ,” ಎಂದು ಕುಟುಕಿದರು.
ಜೆಡಿಎಸ್ ನಿಂದ ಖಾರವಾದ ತಿರುಗೇಟು :

ಡಿಕೆಶಿ ಅವರ ಹೇಳಿಕೆಗೆ ಜೆಡಿಎಸ್ ಪಕ್ಷ ಶುಕ್ರವಾರ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. “ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮಲ್ಲೇನೋ ಮೂಲಭೂತ ಸಮಸ್ಯೆ ಇದೆ. ಬರೀ ಧಿಮಾಕು, ಎಲ್ಲವನ್ನೂ ಬಲ್ಲೆ ಎನ್ನುವ ಪೋಷಾಕು! ಅದಕ್ಕೆ ಏನೋ ಬೆಂಗಳೂರಿನ ಮೂಲಭೂತ ಸೌಕರ್ಯ ಎಕ್ಕುಟ್ಟಿ ಹೋಗಿದೆ,” ಎಂದು ಆರೋಪಿಸಿದೆ.
“ಬಹುಶಃ, ನಿಮಗೆ ನೆಟ್ ವರ್ಕಿಂಗ್ ಸಮಸ್ಯೆ ಕಾಡುತ್ತಿರಬಹುದು. ನಿಮ್ಮ ಮೆದುಳು, ನಾಲಿಗೆಯ ನಡುವೆ ಲೈನಪ್ ಸರಿ ಇದ್ದಂತೆ ಇಲ್ಲ! ಏಕೆಂದರೆ, ಇನ್ನೊಬ್ಬರ ಹೇಳಿಕೆಯನ್ನು ಅರ್ಥೈಸಿಕೊಳ್ಳುವ ಬೌದ್ಧಿಕ ಸಾಮರ್ಥ್ಯ ನಿಮಗಿಲ್ಲ. ಅಸಂಬದ್ಧವಾಗಿ ಪ್ರತಿಕ್ರಿಯೆ ಕೊಡುತ್ತೀರಿ. ನಗೆಪಾಟಲಿಗೆ ತುತ್ತಾಗುತ್ತೀರಿ,” ಎಂದು ಟೀಕಿಸಿದೆ.
“ತೆರಿಗೆ ಬೀಜಾಸುರನಂತೆ ಬೆಂಗಳೂರಿನ ಜನರ ರಕ್ತ ಹೀರಿ ತೆರಿಗೆ ಪೀಕುತ್ತಿದ್ದೀರಿ. ಮೊದಲು ಅದಕ್ಕೆ ಲೆಕ್ಕ ಕೊಡಿ. ಅದು ಯಾರಪ್ಪನ ದುಡ್ಡು ಅಲ್ಲ, ಜನರ ಬೆವರಿನ ಹಣ. ಆ ದುಡ್ಡು ಎಲ್ಲಿ ಹೋಗುತ್ತಿದೆ? ಅದನ್ನೇ ಕುಮಾರಸ್ವಾಮಿ ಅವರು ಕೇಳಿದ್ದು. ಉದ್ಯಮಿಗಳಿಗೆ ಧಮ್ಕಿ ಹಾಕಿ, ದಾದಾಗಿರಿ ಮಾಡುವುದಕ್ಕೆ ನಿಮ್ಮನ್ನು ಡಿಸಿಎಂ ಮಾಡಿಲ್ಲ ಮಿ. ಶಿವಕುಮಾರ್,” ಎಂದು ಜೆಡಿಎಸ್ ಹೇಳಿದೆ.
ಕೊನೆಯಲ್ಲಿ, “ಮೊದಲು ರಸ್ತೆ ಗುಂಡಿ ಮುಚ್ಚಿ ಮಾನ ಕಾಪಾಡಿಕೊಳ್ಳಿ. ಕೈಯಲ್ಲಿ ಆಗದಿದ್ದರೆ ಬೆಂಗಳೂರು ಉಸ್ತುವಾರಿ ಬಿಡಿ. ‘ಟ್ವಿಟ್ಟರ್ ಗಿಟ್ಟರ್’ ಎಂದು ನಾಲಿಗೆ ಜಾರಬೇಡಿ,” ಎಂದು ತೀಕ್ಷ್ಣವಾಗಿ ಹೇಳಿದೆ.























