ಬೆಂಗಳೂರು, ಸೆ.18 www.bengaluruwire.com : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿರುವ ಎಲ್ಲಾ ನಗರ ಪಾಲಿಕೆಗಳಲ್ಲಿ ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ 5 ನಗರ ಪಾಲಿಕೆಗಳಿಗೆ ತಲಾ 25 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದ್ದು, ಇದೇ ಶುಕ್ರವಾರದಿಂದಲೇ ಕಾಮಗಾರಿಯನ್ನು ಆರಂಭಿಸುವಂತೆ ಅವರು ಆದೇಶಿಸಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು 30ಕ್ಕೂ ಹೆಚ್ಚು ತಂಡಗಳನ್ನು ರಚಿಸಲಾಗಿದ್ದು, ಪ್ರತಿ ರಸ್ತೆಗೂ ಪ್ರತ್ಯೇಕ ಏಜೆನ್ಸಿಯನ್ನು ನಿಗದಿಪಡಿಸಲಾಗಿದೆ.


ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೆಂದ್ರ ಚೋಳನ್ ರವರು ಮಾತನಾಡಿ, ಕೇಂದ್ರ ನಗರ ಪಾಲಿಕೆಯಲ್ಲಿ ಈಗಾಗಲೇ ರಸ್ತೆಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿದ್ದು, ರಸ್ತೆ ಗುಂಡಿಗಳನ್ನು ಸಮಗ್ರ ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ. ಅದರಂತೆ, 30ಕ್ಕೂ ಹೆಚ್ಚು ತಂಡಗಳನ್ನು ನಿಯೋಜನೆ ಮಾಡಿಕೊಂಡು, ಪ್ರತಿ ರಸ್ತೆಗೂ ಪ್ರತ್ಯೇಕ ಏಜೆನ್ಸಿಯನ್ನು ನಿಗದಿಪಡಿಸಿ, ಗಡುವನ್ನು ನೀಡಿ ಸಾಮೂಹಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುವುದಾಗಿ ತಿಳಿಸಿದರು.
ಜೆಸಿ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ:

ಜಿಸಿ ರಸ್ತೆಯ ಮಿನರ್ವ ವೃತ್ತದಿಂದ ಟೌನ್ ಹಾಲ್ ವರೆಗಿನ 1 ಕಿ.ಮೀ. ವೈಟ್ ಟಾಪಿಂಗ್ ಕಾಮಗಾರಿಯನ್ನು ಅಕ್ಟೋಬರ್ 31ರೊಳಗೆ ಪೂರ್ಣಗೊಳಿಸುವಂತೆ ಮಹೇಶ್ವರ್ ರಾವ್ ಸೂಚಿಸಿದ್ದಾರೆ. ಕಾಮಗಾರಿಯು ಹಂತ ಹಂತವಾಗಿ ನಡೆಯುತ್ತಿದ್ದು, ಮೊದಲ ಹಂತವನ್ನು ಸೆಪ್ಟೆಂಬರ್ 30ರೊಳಗೆ ಮುಗಿಸಲಾಗುವುದು ಎಂದು ಬಿ-ಸ್ಮೈಲ್ ತಾಂತ್ರಿಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಕೇಂದ್ರ ಪಾಲಿಕೆ ನಿಯಂತ್ರಣ ಕೊಠಡಿ ಸ್ಥಾಪನೆ: ಶಾಂತಿನಗರ, ಸಿ.ವಿ. ರಾಮನ್‌ನಗರ, ಗಾಂಧಿನಗರ, ಚಾಮರಾಜಪೇಟೆ, ಚಿಕ್ಕಪೇಟೆ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಸಾರ್ವಜನಿಕರು ದೂರು ಮತ್ತು ಮಾಹಿತಿ ನೀಡಲು ಮೆಯೋಹಾಲ್ ಕೋರ್ಟ್ ಆವರಣದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಸಾರ್ವಜನಿಕರು 080-22975803 ಅಥವಾ 9480685702 ಸಂಖ್ಯೆಗಳಿಗೆ ಕರೆ ಮಾಡಬಹುದು.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ
ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ರಾಜೇಂದ್ರ ಕೆ.ವಿ. ಅವರು ರಸ್ತೆ ಗುಂಡಿಗಳನ್ನು ಮುಚ್ಚಲು ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಪ್ರಮುಖ ಸೂಚನೆಗಳು:

ಹೈ ಡೆನ್ಸಿಟಿ ಕಾರಿಡಾರ್ ಮತ್ತು ವಾರ್ಡ್ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿ ರಸ್ತೆಗಳನ್ನು ಗುಂಡಿ ರಹಿತ ರಸ್ತೆಗಳಾಗಿ ಪರಿವರ್ತಿಸಲು ಸೂಚನೆ ನೀಡಿದ್ದಾರೆ. ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯ ಮೊದಲು, ಮಧ್ಯೆ ಹಾಗೂ ನಂತರದ ಫೋಟೋಗಳನ್ನು ತೆಗೆದು ದಾಖಲಿಸುವಂತೆ ಆದೇಶಿಸಿದ್ದಾರೆ.
ವಿವಿಧ ಕಡೆ ಆಯುಕ್ತರಿಂದ ಪರಿಶೀಲನೆ:
ಆಯುಕ್ತರು ಮತ್ತಿಕೆರೆ ವಾರ್ಡ್‌ನ ಮಸ್ಟರಿಂಗ್ ಕೇಂದ್ರ, ಅಟಲ್ ಜಿ ಉದ್ಯಾನವನ ಹಾಗೂ ಇತರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೌರಕಾರ್ಮಿಕರ ಹಾಜರಾತಿ, ರಸ್ತೆ ಬದಿಯಲ್ಲಿನ ತ್ಯಾಜ್ಯ ಹಾಗೂ ಕಟ್ಟಡ ಭಗ್ನಾವಶೇಷಗಳ ತೆರವು, ಪಾದಚಾರಿ ಮಾರ್ಗದ ದುರಸ್ತಿ ಮತ್ತು ಉದ್ಯಾನವನದಲ್ಲಿನ ಜಿಮ್ ಉಪಕರಣಗಳ ದುರಸ್ತಿ ಕುರಿತು ಅಗತ್ಯ ಸೂಚನೆ ನೀಡಿದ್ದಾರೆ.
ಬೆಂಗಳೂರು ಉತ್ತರ ನಗರ ಪಾಲಿಕೆ
ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳು ಮತ್ತು ಸಾರ್ವಜನಿಕ ಪ್ರದೇಶಗಳ ಸ್ವಚ್ಛತೆಗಾಗಿ ವಿಶೇಷ ಸಾಮೂಹಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸೆ.21ರಂದು ಸ್ವಚ್ಛತಾ ಕಾರ್ಯಕ್ರಮ:

ಸೆಪ್ಟೆಂಬರ್ 21ರಂದು ಬೆಳಿಗ್ಗೆ 5.30 ರಿಂದ ಮೇಖ್ರಿ ವೃತ್ತದಿಂದ ಯಲಹಂಕ ವಾಯುನೆಲೆವರೆಗೆ ಬೃಹತ್ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ. ರಸ್ತೆಗಳ ಸ್ವಚ್ಛತೆ, ಚರಂಡಿಗಳಲ್ಲಿ ಹೂಳು ತೆಗೆಯುವುದು, ಭಗ್ನಾವಶೇಷ ತೆರವುಗೊಳಿಸುವುದು ಮತ್ತು ಅನಗತ್ಯ ಕೇಬಲ್‌ಗಳನ್ನು ತೆಗೆದು ಹಾಕುವ ಕಾರ್ಯ ನಡೆಯಲಿದೆ.
ಬಾಕಿ ಕಂದಾಯ ಶೀಘ್ರವಾಗಿ ಸಂಗ್ರಹಸಿ :
ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ₹1,242 ಕೋಟಿ ತೆರಿಗೆ ಸಂಗ್ರಹಣೆಯ ಗುರಿ ಇದ್ದು, ಇದುವರೆಗೆ ₹542.32 ಕೋಟಿ ಸಂಗ್ರಹವಾಗಿದೆ. ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ಶೀಘ್ರವಾಗಿ ವಸೂಲಿ ಮಾಡಲು ಸೂಚನೆ ನೀಡಲಾಗಿದೆ.
ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ: ಆಯುಕ್ತರು ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸಾ ಕೇಂದ್ರ ಮತ್ತು ಮೇಡಿ ಅಗ್ರಹಾರದ ವಿದ್ಯುತ್ ಚಿತಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೀದಿ ನಾಯಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಮತ್ತು ಚಿತಾಗಾರದಲ್ಲಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಲು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.






















