ಚಿಕ್ಕಮಗಳೂರು, ಸೆ.12 www.bengaluruwire.com : ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿ ಅನುಮತಿ ನೀಡಿದ್ದು, ಯೋಜನೆಯಿಂದ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಜಾರಿಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಯೋಜನೆಯ ಬಗ್ಗೆ ಸ್ಥಳೀಯರಲ್ಲಿ ಯಾವುದೇ ಆತಂಕ ಬೇಡ ಎಂದು ಅವರು ಭರವಸೆ ನೀಡಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಪರಿಸರದ ಮೇಲೆ ಯಾವುದೇ ದುಷ್ಪರಿಣಾಮವಾಗುವುದಿಲ್ಲ. ಈ ಕುರಿತು ಜನರಿಗೆ ಮಾಹಿತಿ ನೀಡಿ, ಅವರ ಮನವೊಲಿಸಿದ ನಂತರ ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
120 ಎಕರೆ ಜಮೀನು ಬಳಕೆ:
2000 ಮೆಗಾವ್ಯಾಟ್ ಸಾಮರ್ಥ್ಯದ ಈ ಯೋಜನೆಗೆ ಕೇವಲ 120 ಎಕರೆ ಜಮೀನು ಸಾಕು. ಇದರಲ್ಲಿ 50 ಎಕರೆ ಖಾಸಗಿ ಭೂಮಿಯಾಗಿದ್ದು, ಉಳಿದದ್ದು ಅರಣ್ಯ ಮತ್ತು ಕಂದಾಯ ಭೂಮಿಯಾಗಿದೆ. ಖಾಸಗಿ ಭೂಮಿಗೆ ಸೂಕ್ತ ಪರಿಹಾರ ನೀಡಲಾಗುವುದು. ಯೋಜನೆಗೆ ಬಳಸಿಕೊಳ್ಳುವ ಅರಣ್ಯ ಭೂಮಿಗೆ ಬದಲಾಗಿ ಅರಣ್ಯೀಕರಣಕ್ಕೆ ಬೇಕಾದ ಬೇರೆ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲಾಗುವುದು ಎಂದು ಸಚಿವರು ವಿವರಿಸಿದರು.

ಪರಿಸರ ಸ್ನೇಹಿ ಯೋಜನೆ:
ಈ ಪಂಪ್ಡ್ ಸ್ಟೋರೇಜ್ ಯೋಜನೆಗೆ ಯಾವುದೇ ಹೊಸ ಜಲಾಶಯಗಳನ್ನು ನಿರ್ಮಿಸುವುದಿಲ್ಲವಾದ್ದರಿಂದ ನದಿಯ ಹರಿವಿಗೆ ಅಡ್ಡಿಯಾಗುವುದಿಲ್ಲ. ಗೇರುಸೊಪ್ಪದಿಂದ ಪೈಪ್‌ಲೈನ್ ಮೂಲಕ ನೀರನ್ನು ತಲಕಳಲೆ ಜಲಾಶಯಕ್ಕೆ ಪಂಪ್ ಮಾಡಲಾಗುತ್ತದೆ. ಈ ಪೈಪ್‌ಲೈನ್‌ಗಳು ನೆಲದಡಿಯಲ್ಲಿ ಇರುವುದರಿಂದ ಹಾಗೂ ಹೆಚ್ಚಿನ ನಿರ್ಮಾಣಗಳು ಸುರಂಗಗಳ ಒಳಗೆ ನಡೆಯುವುದರಿಂದ ಪರಿಸರಕ್ಕೆ ದೊಡ್ಡ ಮಟ್ಟದ ಹಾನಿಯಾಗುವುದಿಲ್ಲ.
ಈ ಯೋಜನೆಯ ಅನುಷ್ಠಾನದಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚುವರಿಯಾಗಿ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು ಮತ್ತು ಅಗತ್ಯ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಯನ್ನು ಸುಲಭಗೊಳಿಸಬಹುದು ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ರೈತರಿಗೆ ಸೌರ ವಿದ್ಯುತ್ ಯೋಜನೆ:
ರೈತರ ನೀರಾವರಿಗಾಗಿ ಕುಸುಮ್ ಬಿ ಯೋಜನೆ ಜಾರಿಗೊಳಿಸಲಾಗಿದೆ. ವಿದ್ಯುತ್ ಫೀಡರ್‌ನಿಂದ 500 ಮೀಟರ್‌ಗಿಂತ ದೂರ ಇರುವ ಕೊಳವೆ ಬಾವಿಗಳಿಗೆ ಈ ಯೋಜನೆಯಡಿ ಸೌರ ವಿದ್ಯುತ್ ನೀಡಲಾಗುತ್ತಿದೆ. ಈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಶೇ. 80ರಷ್ಟು ಸಬ್ಸಿಡಿ ನೀಡಲಾಗುತ್ತಿದ್ದು, ರೈತರು ಕೇವಲ ಶೇ. 20ರಷ್ಟು ಮಾತ್ರ ಭರಿಸಬೇಕು ಎಂದು ತಿಳಿಸಿದರು.
ಅದೇ ರೀತಿ, ಕುಸುಮ್ ಸಿ ಯೋಜನೆ ಅಡಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ 10,000 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಿಂದ 2500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ವಿದ್ಯುತ್ ಅಭಾವವಿಲ್ಲ. ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.
ಸಬ್‌ಸ್ಟೇಷನ್‌ಗಳು ಅಥವಾ ಲೈನ್‌ಗಳಲ್ಲಿ ಸಮಸ್ಯೆ ಇರುವಲ್ಲಿ ಮಾತ್ರ ವಿದ್ಯುತ್ ವ್ಯತ್ಯಯವಾಗಬಹುದು. ಇದಕ್ಕಾಗಿ, ಪ್ರತಿ ವರ್ಷ ರಾಜ್ಯದಲ್ಲಿ 100 ಹೊಸ ಸಬ್‌ಸ್ಟೇಷನ್‌ಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಚ್.ಡಿ.ತಮ್ಮಯ್ಯ, ಟಿ.ಡಿ.ರಾಜೇಗೌಡ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.























