ಬೆಂಗಳೂರು, ಸೆ.12 www.bengaluruwire.com : ನಗರದ ಘನತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿ.ಎಸ್.ಡಬ್ಲ್ಯು.ಎಂ.ಎಲ್) ಮಹತ್ವದ ಕ್ರಮಗಳನ್ನು ಕೈಗೊಂಡಿದೆ.
ನಾಗರಿಕರ ದೂರುಗಳನ್ನು ತ್ವರಿತವಾಗಿ ಪರಿಹರಿಸಲು ವಾಟ್ಸಾಪ್ ಚಾಟ್‌ಬಾಟ್ ಸೇವೆ ಜಾರಿಗೊಳಿಸಿರುವುದು, ಆಟೋ ಟಿಪ್ಪರ್‌ಗಳ ಹಾಜರಾತಿ ಹೆಚ್ಚಿಸಲು ಸಮಯ ಪರಿಷ್ಕರಿಸಿರುವುದು ಮತ್ತು ಏಕಬಳಕೆ ಪ್ಲಾಸ್ಟಿಕ್ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವುದು ಈ ಕ್ರಮಗಳಲ್ಲಿ ಪ್ರಮುಖವಾಗಿವೆ. ಈ ಎಲ್ಲ ಬದಲಾವಣೆಗಳ ಕುರಿತು ಬಿ.ಎಸ್.ಡಬ್ಲ್ಯು.ಎಂ.ಎಲ್ ಸಿಇಒ ಕರೀಗೌಡ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ವಾಟ್ಸಾಪ್ ಮೂಲಕ ದೂರು ಪರಿಹಾರಕ್ಕೆ ವೇಗ :
ನಗರದಲ್ಲಿ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ನಾಗರಿಕರ ಕುಂದುಕೊರತೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಡಿಜಿಟಲ್ ದೂರು ಪರಿಹಾರ ವೇದಿಕೆಯಾದ ವಾಟ್ಸಾಪ್ ಚಾಟ್‌ಬಾಟ್ ಸಂಖ್ಯೆ 9448197197 ಅನ್ನು ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ತಮ್ಮ ದೂರುಗಳನ್ನು ದಿನದ 24 ಗಂಟೆಯೂ ನೇರವಾಗಿ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಈ ಹೊಸ ವ್ಯವಸ್ಥೆ ಸಾಕಷ್ಟು ಯಶಸ್ವಿಯಾಗಿದ್ದು, ಆಗಸ್ಟ್ 2025 ರಲ್ಲಿ ಸ್ವೀಕರಿಸಿದ 1,483 ದೂರುಗಳ ಪೈಕಿ 1,464 (ಶೇ. 99) ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಸೆಪ್ಟೆಂಬರ್ 2025 ರಿಂದ ಈವರೆಗೆ ಸ್ವೀಕರಿಸಿದ 515 ದೂರುಗಳಲ್ಲಿ 423 (ಶೇ. 82) ದೂರುಗಳನ್ನು ಪರಿಹರಿಸಲಾಗಿದೆ ಎಂದು ಕರೀಗೌಡ ಅವರು ತಿಳಿಸಿದರು. ಇದನ್ನೂ ಓದಿ : ಬೆಂಗಳೂರು: ನಮ್ಮ ಮೆಟ್ರೋ ಮೂಲಕ ಕೇವಲ 20 ನಿಮಿಷಗಳಲ್ಲಿ ಹೃದಯ ಸಾಗಾಟ, ಮತ್ತೊಂದು ಜೀವಕ್ಕೆ ಜೀವದಾನ
ಈ ವ್ಯವಸ್ಥೆಯು ನಾಗರಿಕರಿಗೆ ಅನುಕೂಲವಾಗಿದ್ದು, ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲು ಸಹಕಾರಿಯಾಗಿದೆ. ಇದಲ್ಲದೆ, ಟೋಲ್‌ಫ್ರೀ ಸಹಾಯವಾಣಿ (1533) ಮತ್ತು ನಮ್ಮ ಬೆಂಗಳೂರು ಮೊಬೈಲ್ ಅಪ್ಲಿಕೇಶನ್ ಮೂಲಕವೂ ದೂರು ದಾಖಲಿಸಲು ಅವಕಾಶವಿದೆ.
ಆಟೋ ಟಿಪ್ಪರ್ ವಾಹನ ಸಮಯ ಪರಿಷ್ಕರಣೆ : ಆಟೋ ಟಿಪ್ಪರ್‌ಗಳ ಹಾಜರಾತಿಯಲ್ಲಿ ಗಣನೀಯ ಏರಿಕೆ
ನಗರದ ಸ್ವಚ್ಛತಾ ಕಾರ್ಯಗಳನ್ನು ಸುಧಾರಿಸಲು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆಟೋ ಟಿಪ್ಪರ್ ವಾಹನಗಳ ಸಮಯವನ್ನು ಪರಿಷ್ಕರಿಸಲಾಗಿದೆ. ಆಗಸ್ಟ್ 25ರಿಂದ ವಾಹನಗಳ ಸ್ಕ್ಯಾನಿಂಗ್ ಸಮಯವನ್ನು ಬೆಳಗ್ಗೆ 5:30 ರಿಂದ 6:30 ರವರೆಗೆ ನಿಗದಿಪಡಿಸಲಾಗಿದೆ. ಈ ಹಿಂದಿದ್ದ ಬೆಳಗ್ಗೆ 6:00 ರಿಂದ 7:30 ರವರೆಗಿನ ಸಮಯವನ್ನು ಒಂದು ಗಂಟೆ ಮುಂಚಿತಗೊಳಿಸಿರುವುದರಿಂದ ಆಟೋ ಟಿಪ್ಪರ್‌ಗಳು ಸಾರ್ವಜನಿಕರ ದೈನಂದಿನ ಚಟುವಟಿಕೆಗಳಿಗೂ ಮುನ್ನವೇ ತ್ಯಾಜ್ಯ ಸಂಗ್ರಹಿಸಲು ಸಾಧ್ಯವಾಗಿದೆ.
ಈ ಬದಲಾವಣೆಯ ಪರಿಣಾಮವಾಗಿ, ಆಟೋ ಟಿಪ್ಪರ್‌ಗಳ ಹಾಜರಾತಿಯಲ್ಲಿ ಗಣನೀಯ ಪ್ರಗತಿ ಕಂಡುಬಂದಿದೆ. ಆಗಸ್ಟ್ 2025 ರಲ್ಲಿ ಶೇ. 84 ರಷ್ಟಿದ್ದ ಹಾಜರಾತಿಯು ಪ್ರಸ್ತುತ ಶೇ. 95 ಕ್ಕೆ ಏರಿಕೆಯಾಗಿದೆ. ಇದರಿಂದ ನಿವಾಸಿಗಳು ಕೆಲಸಕ್ಕೆ ಹೊರಡುವ ಮುನ್ನವೇ ತ್ಯಾಜ್ಯವನ್ನು ವಿಲೇವಾರಿ ಮಾಡಲು ಅನುಕೂಲವಾಗಿದೆ.
ಏಕಬಳಕೆ ಪ್ಲಾಸ್ಟಿಕ್ ವಿರುದ್ಧ ದಂಡ ಪ್ರಯೋಗ :
ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡುವ ನಿಟ್ಟಿನಲ್ಲಿ ಬಿ.ಎಸ್.ಡಬ್ಲ್ಯು.ಎಂ.ಎಲ್. ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಕಳೆದ ಅಕ್ಟೋಬರ್‌ನಿಂದ ಈವರೆಗೆ ಸುಮಾರು 24.57 ಟನ್ ಏಕಬಳಕೆ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಒಟ್ಟು ರೂ. 38 ಲಕ್ಷ ದಂಡ ವಿಧಿಸಲಾಗಿದೆ ಎಂದು ಕರೀಗೌಡ ಅವರು ತಿಳಿಸಿದ್ದಾರೆ.
ಪ್ಲಾಸ್ಟಿಕ್ ಉತ್ಪಾದಕರು, ಸಗಟು ಹಾಗೂ ಚಿಲ್ಲರೆ ಮಾರಾಟಗಾರರ ಮೇಲೆ ದಾಳಿ ನಡೆಸಲು 27 ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ವಾರಕ್ಕೆ ಐದು ದಿನಗಳ ಕಾಲ ಕಾರ್ಯಾಚರಣೆ ನಡೆಸುತ್ತಿವೆ. 281 ಸಗಟು ವ್ಯಾಪಾರಿಗಳಿಂದ ರೂ. 19.66 ಲಕ್ಷ ಮತ್ತು 2,842 ಚಿಲ್ಲರೆ ವ್ಯಾಪಾರಿಗಳಿಂದ ರೂ. 18.41 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಲು ಸಹಕರಿಸುವಂತೆ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದು, ಶಾಪಿಂಗ್‌ಗೆ ಹೋಗುವಾಗ ಬಟ್ಟೆ ಅಥವಾ ಪೇಪರ್ ಬ್ಯಾಗ್‌ಗಳನ್ನು ಬಳಸುವಂತೆ ತಿಳಿಸಿದ್ದಾರೆ.























