ಬೆಂಗಳೂರು, ಸೆ.12 www.bengaluruwire.com : ಜೀವ ಉಳಿಸುವ ಮಹತ್ತರ ಕಾರ್ಯಕ್ಕೆ ನಮ್ಮ ಮೆಟ್ರೋ ಮತ್ತೊಮ್ಮೆ ಸಾಕ್ಷಿಯಾಗಿದೆ. ಯಶವಂತಪುರ ಮೆಟ್ರೋ ನಿಲ್ದಾಣದಿಂದ ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆ ನಿಲ್ದಾಣದವರೆಗೆ ಮಾನವ ಹೃದಯವನ್ನು ಅತ್ಯಂತ ಕಡಿಮೆ ಸಮಯದಲ್ಲಿ ಅಂದರೆ ಕೇವಲ 20 ನಿಮಿಷಗಳಲ್ಲಿ ಸಾಗಾಟ ಮಾಡಲಾಗಿದೆ.
ಇದರಿಂದ ಮತ್ತೊಂದು ಜೀವಕ್ಕೆ ಹೊಸ ಭರವಸೆ ಮೂಡಿದೆ. ಸೆಪ್ಟೆಂಬರ್ 11 ರಂದು ಸಂಜೆ 4:21ಕ್ಕೆ ವಾಹನದಟ್ಡಣೆ ಅವಧಿಯಲ್ಲಿ, ಯಶವಂತಪುರ ನಿಲ್ದಾಣದಿಂದ ಹೊರಟ ಮೆಟ್ರೋ ರೈಲು 7 ನಿಲ್ದಾಣಗಳನ್ನು ಹಾದು ಸರಿಯಾಗಿ ಸಂಜೆ 4:41ಕ್ಕೆ ಮಂತ್ರಿ ಸ್ಕ್ವೇರ್ ನಿಲ್ದಾಣವನ್ನು ತಲುಪಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಪೋಲೋ ಆಸ್ಪತ್ರೆಯ ವೈದ್ಯಕೀಯ ತಂಡದೊಂದಿಗೆ ಸೇರಿ ಈ ವಿಶೇಷ ಕಾರ್ಯವನ್ನು ಯಶಸ್ವಿಯಾಗಿ ನಡೆಸಿತು. ಮಾನವ ಹೃದಯವನ್ನು ಸಂಪೂರ್ಣ ಸುರಕ್ಷಿತ ಮತ್ತು ನಿರ್ದಿಷ್ಟ ತಾಪಮಾನದಲ್ಲಿ ಸಾಗಿಸುವ ಕಾರ್ಯ ಸವಾಲಿನದ್ದಾಗಿತ್ತು. ಆದರೆ ಮೆಟ್ರೋ ರೈಲು ಸಂಚಾರವನ್ನು ಸುಗಮಗೊಳಿಸಿ, ಯಾವುದೇ ಅಡೆತಡೆಗಳಿಲ್ಲದೆ ಈ ಕಾರ್ಯಕ್ಕೆ ನೆರವಾಗಿದೆ.
ಈ ಕಾರ್ಯದಲ್ಲಿ ಸಹಾಯ ನೀಡಿದ ಅಪೋಲೋ ಆಸ್ಪತ್ರೆಯ ತಂಡಕ್ಕೆ ಬಿಎಂಆರ್ ಸಿಎಲ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಮಾನವೀಯ ಮತ್ತು ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸಂಸ್ಥೆಗಳೊಂದಿಗೆ ಸಹಕರಿಸಲು ಬಿಎಂಆರ್ ಸಿಎಲ್ ಯಾವಾಗಲೂ ಬದ್ಧವಾಗಿದೆ ಎಂದು ಹೇಳಿಕೆ ನೀಡಿದೆ.























