ಬೆಂಗಳೂರು, ಸೆ.08 www.bengaluruwire.com : ನಗರದ ಪ್ರತಿಷ್ಠಿತ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (IIA) ಯಿಂದ ಸೆಪ್ಟೆಂಬರ್ 7 ಮತ್ತು 8ರಂದು ಸಂಭವಿಸಿದ ಸಂಪೂರ್ಣ ಚಂದ್ರಗ್ರಹಣದ ವೈಜ್ಞಾನಿಕ ಅವಲೋಕನದೊಂದಿಗೆ ಆಕರ್ಷಕ ಛಾಯಾಚಿತ್ರಗಳನ್ನು ತೆಗೆದು ದಾಖಲಿಸಲಾಗಿದೆ.
ಈ ಗ್ರಹಣವನ್ನು ಭಾರತದಾದ್ಯಂತ ವೀಕ್ಷಿಸಲಾಯಿತು. ವಿಶೇಷವಾಗಿ, ಬೆಂಗಳೂರಿನ ಕೋರಮಂಗಲದಲ್ಲಿರುವ ಐಐಎ ಪ್ರಧಾನ ಕಛೇರಿಯಲ್ಲಿ, ವಿಜ್ಞಾನಿಗಳಾದ ಡಾ. ಅರುಣ್ ಸೂರ್ಯ ಮತ್ತು ಇಂಜಿನಿಯರ್ ಡಾ. ಪ್ರಸನ್ನ ದೇಶಮುಖ್ ಅವರು ಈ ಖಗೋಳ ಘಟನೆಯನ್ನು ವೀಕ್ಷಿಸಿ, ಗ್ರಹಣದ ಹಂತಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಪ್ರಕಟಿಸಿದ ಛಾಯಾಚಿತ್ರಗಳಲ್ಲಿ ಗ್ರಹಣದ ಮೂರು ಮುಖ್ಯ ಹಂತಗಳು ಸ್ಪಷ್ಟವಾಗಿ ಗೋಚರಿಸುತ್ತವೆ: ಭಾಗಶಃ ಗ್ರಹಣ, ಸಂಪೂರ್ಣ ಗ್ರಹಣ, ಮತ್ತು ಪಾಶ್ವ ಛಾಯಾ ಗ್ರಹಣ ಹಂತ.

* ಗ್ರಹಣ ಪ್ರಾರಂಭವಾಗುವ ಮೊದಲು, ಸೆಪ್ಟೆಂಬರ್ 7 ರಂದು ರಾತ್ರಿ 7:59:54 ಕ್ಕೆ ಚಂದ್ರನ ಸಾಮಾನ್ಯ ನೋಟವನ್ನು ಸಹ ಸೆರೆಹಿಡಿಯಲಾಗಿದೆ.

* ಸಂಪೂರ್ಣ ಗ್ರಹಣವು ಸೆಪ್ಟೆಂಬರ್ 7 ರಂದು ತಡರಾತ್ರಿ 11:41:28 ಕ್ಕೆ ಸಂಭವಿಸಿದೆ.
* ಭಾಗಶಃ ಗ್ರಹಣವು ಸೆಪ್ಟೆಂಬರ್ 8 ರಂದು ಮಧ್ಯರಾತ್ರಿ 12:35:40 ಕ್ಕೆ ದಾಖಲಾಗಿದೆ.
* ಪಾಶ್ವ ಛಾಯಾ ಗ್ರಹಣ (ಪೆನಂಬ್ರಲ್) ಹಂತವು ಸೆಪ್ಟೆಂಬರ್ 8 ರಂದು ಮಧ್ಯರಾತ್ರಿ 01:48:48 ಕ್ಕೆ ದಾಖಲಾಗಿದೆ.
ಈ ಎಲ್ಲಾ ಹಂತಗಳನ್ನು ಐಐಎ ಬೆಂಗಳೂರು ಕೇಂದ್ರದಿಂದ ಸೆರೆಹಿಡಿದು ಅಧಿಕೃತವಾಗಿ ಪ್ರಕಟಿಸಲಾಗಿದೆ.






















