ಬೆಂಗಳೂರು, ಆ.30 www.bengaluruwire.com : ಸ್ಥಿರಾಸ್ತಿ ವ್ಯವಹಾರಗಳ ಮೇಲಿನ ನೋಂದಣಿ ಶುಲ್ಕವನ್ನು ಕರ್ನಾಟಕ ಸರ್ಕಾರ ಆಗಸ್ಟ್ 31ರಿಂದ ಜಾರಿಗೆ ಬರುವಂತೆ ಶೇ. 1 ರಿಂದ ಶೇ. 2ಕ್ಕೆ ಹೆಚ್ಚಿಸಿದೆ.
ನೆರೆ ರಾಜ್ಯಗಳ ದರಗಳೊಂದಿಗೆ ಹೋಲಿಸಿದರೆ, ರಾಜ್ಯದಲ್ಲಿ ಈ ಶುಲ್ಕ ಕಡಿಮೆಯಿದ್ದು, ಅದನ್ನು ಸಮೀಕರಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಆಯುಕ್ತ ಮುಲೈ ಮುಗಿಲನ್ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ನೋಂದಣಿ, ಮುದ್ರಾಂಕ ಮತ್ತು ಇತರ ಸೆಸ್‌ಗಳನ್ನು ಒಳಗೊಂಡಂತೆ, ಕರ್ನಾಟಕದಲ್ಲಿ ಒಟ್ಟು ಶುಲ್ಕವು ಇದುವರೆಗೆ ಶೇ. 6.6ರಷ್ಟಿತ್ತು. ಇದೇ ಸಮಯದಲ್ಲಿ, ತಮಿಳುನಾಡಿನಲ್ಲಿ ಶೇ. 9, ಕೇರಳದಲ್ಲಿ ಶೇ. 10, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಶೇ. 7.5ರಷ್ಟು ಶುಲ್ಕ ವಿಧಿಸಲಾಗುತ್ತಿದೆ. ಆದ್ದರಿಂದ, ಶುಲ್ಕಗಳನ್ನು ಇತರೆ ರಾಜ್ಯಗಳೊಂದಿಗೆ ಸಮೀಕರಿಸಲು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಬಲಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದು ವಿವರಿಸಿದ್ದಾರೆ.
ವ್ಯತ್ಯಾಸದ ಮೊತ್ತ ಪಾವತಿಗೆ ಸೂಚನೆ :

ನೋಂದಣಿ ಶುಲ್ಕ ಪರಿಷ್ಕರಣೆ ಹಿನ್ನೆಲೆಯಲ್ಲಿ, ಈಗಾಗಲೇ ದಸ್ತಾವೇಜುಗಳ ನೋಂದಣಿಗೆ ಅಪಾಯಿಂಟ್‌ಮೆಂಟ್ ಪಡೆದಿರುವವರು ಅಥವಾ ಶುಲ್ಕ ಪಾವತಿಸಿ ಅಪಾಯಿಂಟ್‌ಮೆಂಟ್ ಪಡೆಯದಿರುವವರು, ಹೆಚ್ಚುವರಿ ಶುಲ್ಕವನ್ನು ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಪಾವತಿಸಬೇಕು. ಈ ಮೊತ್ತವನ್ನು ಈ ಮೊದಲು ಬಳಸಿದ ಲಾಗಿನ್ ಮೂಲಕವೇ ಪಾವತಿಸಬೇಕಾಗುತ್ತದೆ. ಅರ್ಜಿದಾರರಿಗೆ ನೆರವಾಗುವ ದೃಷ್ಟಿಯಿಂದ, ಈ ಕುರಿತಾದ ಅಗತ್ಯ ಸೂಚನೆಗಳನ್ನು ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಕಳುಹಿಸಲಾಗುತ್ತದೆ ಎಂದು ಮುಲೈ ಮುಗಿಲನ್ ತಿಳಿಸಿದ್ದಾರೆ.
ಅಲ್ಲದೆ, ಈಗಾಗಲೇ ನೋಂದಣಿಗೆ ಸಲ್ಲಿಸಲಾಗಿರುವ ಮತ್ತು ಪರಿಶೀಲನೆಯಲ್ಲಿರುವ ದಸ್ತಾವೇಜುಗಳಿಗೂ ಸಹ ಹೊಸದಾಗಿ ಪರಿಷ್ಕರಿಸಿದ ಶೇ. 2ರ ನೋಂದಣಿ ಶುಲ್ಕವನ್ನು ಮರು ಲೆಕ್ಕ ಹಾಕಲಾಗುತ್ತದೆ. ಈ ವರ್ಗದ ಅರ್ಜಿದಾರರಿಗೆ ಪಾವತಿ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲು ಪರಿಷ್ಕೃತ ಶುಲ್ಕದ ವಿವರವನ್ನು ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ದಸ್ತಾವೇಜುಗಳ ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬವಾಗದಂತೆ, ಎಲ್ಲ ಅರ್ಜಿದಾರರು ಈ ನವೀಕರಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೆಚ್ಚಿನ ವಿವರಗಳಿಗಾಗಿ, ಇಲಾಖೆಯ ಅಧಿಕೃತ ಪೋರ್ಟಲ್‌ನಲ್ಲಿ ಹಂತ ಹಂತವಾಗಿ ಅನುಸರಿಸಬಹುದಾದ ಸೂಚನೆಗಳು ಲಭ್ಯವಿವೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ, ನೀರು, ವಿದ್ಯುತ್ ದರ, ಬಸ್ ಹಾಗೂ ಮೆಟ್ರೋ ಟಿಕೆಟ್ ಬೆಲೆ ಏರಿಕೆ ಹೀಗೆ ನಾನಾ ರೀತಿಯ ಬೆಲೆ ಏರಿಕೆಯಿಂದ ಜನರು ತತ್ತರಿಸಿರುವಾಗ, ಸ್ಥಿರಾಸ್ತಿ ವ್ಯವಹಾರಗಳ ಮೇಲಿನ ನೋಂದಣಿ ಶುಲ್ಕ ಹೆಚ್ಚಳದ ನಿರ್ಧಾರ ಮತ್ತೊಂದು ಹೊರೆಯಾಗಿದೆ ಎಂದು ನಾಗರೀಕರು ಅಳಲು ತೋಡಿಕೊಂಡಿದ್ದಾರೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.






















