ಬೆಂಗಳೂರು, ಆ.29 www.bengaluruwire.com : ದೇಶದಲ್ಲಿ ಹೆಚ್ಚುತ್ತಿರುವ ಮೂಲಭೂತಸೌಕರ್ಯ ಯೋಜನೆಗಳಿಗೆ ಅನುವಾಗುವಂತೆ, ಬೆಂಗಳೂರು ಮೂಲದ ರಕ್ಷಣಾ ಸಾರ್ವಜನಿಕ ಉದ್ದಿಮೆ ಬಿಇಎಂಎಲ್ (BEML), ಭಾರತದಲ್ಲಿ ಸುರಂಗ ಕೊರೆಯುವ ಯಂತ್ರಗಳ (Tunnel Boring Machines – TBMs) ಉತ್ಪಾದನೆಯನ್ನು ಮಾಡಲು ಸಿದ್ಧತೆ ನಡೆಸುತ್ತಿದೆ ಮತ್ತು ವಿನ್ಯಾಸ ಸಲಹೆಗಾಗಿ ಬಿಡ್‌ಗಳನ್ನು ಆಹ್ವಾನಿಸಿದೆ.
ಈ ಕ್ರಮವು ಭಾರತದ ಸ್ವಾವಲಂಬಿ ಕನಸನ್ನು ನನಸು ಮಾಡುವ ‘ಆತ್ಮನಿರ್ಭರ ಭಾರತ’ ಮತ್ತು ‘ಮೇಕ್ ಇನ್ ಇಂಡಿಯಾ’ ಯೋಜನೆಗಳಿಗೆ ಪುಷ್ಟಿ ನೀಡಲಿದೆ. ಭಾರತದಲ್ಲಿ ಮೆಟ್ರೋ ರೈಲು, ಸುರಂಗ ರಸ್ತೆಗಳು, ಜಲವಿದ್ಯುತ್, ನೀರಾವರಿ, ಗಣಿಗಾರಿಕೆ ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಗೆ ಟಿಬಿಎಂಗಳಿಗೆ ಬೇಡಿಕೆ ಹೆಚ್ಚುತ್ತಿದೆ.
ಭೂಗರ್ಭದಲ್ಲಿ ಸುರಂಗ ಮಾರ್ಗಗಳನ್ನು ನಿರ್ಮಿಸಲು ಬಳಸಲಾಗುವ ಈ ಟಿಬಿಎಂ ಯಂತ್ರಗಳಿಗಾಗಿ ಭಾರತ ಇದುವರೆಗೂ ವಿದೇಶಿ, ಅದರಲ್ಲೂ ನಿರ್ದಿಷ್ಟವಾಗಿ ಚೀನಾ ದೇಶಗಳ ಮೇಲೆ ಅವಲಂಬಿತವಾಗಿತ್ತು. ಬಿಇಎಂಎಲ್ ಈಗಾಗಲೇ ಆಸ್ಟ್ರಿಯಾ ಮತ್ತು ಜಪಾನ್‌ನಂತಹ ದೇಶಗಳ ಸಂಸ್ಥೆಗಳೊಂದಿಗೆ ಟಿಬಿಎಂ ವಿಷಯವಾಗಿ ಚರ್ಚೆಗಳನ್ನು ಪ್ರಾರಂಭಿಸಿದೆ. “ಈ ಟೆಂಡರ್ ವಿನ್ಯಾಸ ಸಲಹೆಗಾಗಿ, ಮತ್ತು ಜಾಗತಿಕ ಸಂಸ್ಥೆಗಳಿಂದ ನಮಗೆ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು ನಾವು ಎದುರು ನೋಡುತ್ತಿದ್ದೇವೆ. ಉತ್ಪಾದನೆಗೆ ಇನ್ನೂ ಸ್ವಲ್ಪ ಸಮಯವಾಗುತ್ತದೆ ” ಎಂದು ಮೂಲಗಳು ತಿಳಿಸಿದೆ.
ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಬಿಇಎಂಎಲ್, ಟಿಬಿಎಂಗಳ ಸ್ಥಳೀಯ ವಿನ್ಯಾಸ ಮತ್ತು ಅಭಿವೃದ್ಧಿಗಾಗಿ ಜಾಗತಿಕವಾಗಿ ಪ್ರಸಿದ್ಧ ವಿನ್ಯಾಸ ಸಲಹಾ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಕೋರಿ ಆಸಕ್ತಿ ಅಭಿವ್ಯಕ್ತಿ (ಇಒಐ- EOI)ಯನ್ನು ಪ್ರಾರಂಭಿಸಿದೆ. ಕಂಪನಿಯು 6 ಮೀಟರ್‌ಗಳಿಂದ 16.5 ಮೀಟರ್ ವ್ಯಾಸದವರೆಗಿನ ಟಿಬಿಎಂಗಳನ್ನು ವಿನ್ಯಾಸಗೊಳಿಸುವಲ್ಲಿ ಸಾಬೀತಾದ ದಾಖಲೆಯನ್ನು ಹೊಂದಿರುವ ಆಸಕ್ತ ಸಂಸ್ಥೆಗಳನ್ನು ಹುಡುಕುತ್ತಿದೆ.

ಪ್ರಸ್ತುತ, ಭಾರತವು ಮುಖ್ಯವಾಗಿ ಹೆರೆಂಕ್ನೆಕ್ಟ್ (ಜರ್ಮನಿ), ಟೆರಾಟೆಕ್ (ಆಸ್ಟ್ರೇಲಿಯಾ), ಸಿಆರ್ ಸಿಎಚ್ಐ (CRCHI) ಮತ್ತು ಎಸ್ ಟಿಇಸಿ (STEC- ಚೀನಾ) ಮತ್ತು ಕೊಮಾಟ್ಸು (ಜಪಾನ್) ಗಳಿಂದ ಆಮದು ಮಾಡಿಕೊಳ್ಳುವ ಟಿಬಿಎಂ ಗಳನ್ನು ಹೆಚ್ಚು ಅವಲಂಬಿಸಿದೆ. ಇವುಗಳಲ್ಲಿ ಹಲವು ಚೀನಾದಲ್ಲಿ ಜೋಡಿಸಲ್ಪಟ್ಟಿವೆ. ಇತ್ತೀಚಿನ ಭಾರತ-ಚೀನಾ ಗಡಿ ಬಿಕ್ಕಟ್ಟು ಟಿಬಿಎಂ ಆಮದನ್ನು ಅಡ್ಡಿಪಡಿಸಿತು. ಇದು ಮುಂಬೈನ ಭೂಗತ ಮೆಟ್ರೋ ಯೋಜನೆಯಂತಹ ಪ್ರಮುಖ ಮೂಲಸೌಕರ್ಯ ಯೋಜನೆಗಳ ಮೇಲೆ ಪರಿಣಾಮ ಬೀರುತ್ತಿದೆ.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA)ವು ಸ್ಥಳೀಯವಾಗಿ ಟಿಬಿಎಂ ಯಂತ್ರದ ಉತ್ಪಾದನೆಯನ್ನು ಪ್ರೋತ್ಸಾಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜೂನ್ 2025 ರಲ್ಲಿ ನವದೆಹಲಿಯಲ್ಲಿ ಬಿಇಎಂಎಲ್‌ನ ಹಿರಿಯ ಅಧಿಕಾರಿಗಳೊಂದಿಗೆ ಈ ಸಂಬಂಧ ಸಭೆ ನಡೆಸಲಾಗಿತ್ತು ಎಂದು ಎಂಒಎಚ್ ಯುಎ ಮೂಲಗಳು ತಿಳಿಸಿವೆ, ಅಲ್ಲಿ ಪಿಎಸ್‌ಯು 6 ಮೀಟರ್ ನಿಂದ 15 ಮೀಟರ್ ವ್ಯಾಸದ ಟಿಬಿಎಂಗಳನ್ನು ತಯಾರಿಸುವ ಪ್ರಸ್ತಾವನೆಯನ್ನು ಮಂಡಿಸಿತ್ತು ಎಂದು ತಿಳಿದುಬಂದಿದೆ.
ಬಿಇಎಂಎಲ್‌ನ ಈ ಮಹತ್ವದ ನಿರ್ಧಾರವು, ಸುರಂಗ ಮಾರ್ಗಗಳ ನಿರ್ಮಾಣದಲ್ಲಿ ಟಿಬಿಎಂ ಮೇಲಿನ ಭಾರತದ ಆಮದು ಅವಲಂಬನೆಯನ್ನು ತೀವ್ರವಾಗಿ ಕಡಿಮೆ ಮಾಡಲಿದೆ. ಬಿಇಎಂಎಲ್ ಈಗಾಗಲೇ ವಂದೇ ಭಾರತ್ ಸ್ಲೀಪರ್ ರೈಲುಗಳು ಮತ್ತು ಇತರ ಬಗೆಯ ರೋಲಿಂಗ್ ಸ್ಟಾಕ್‌ಗಳನ್ನು ತಯಾರಿಸುತ್ತಿದೆ. ಇದೇ ಘಟಕದಲ್ಲಿ ಈಗ ಟಿಬಿಎಂ ಉತ್ಪಾದನಾ ವಿಭಾಗವನ್ನು ಸ್ಥಾಪಿಸಲಾಗುತ್ತಿದೆ.
ದೇಶದ ನಗರೀಕರಣ ಹೆಚ್ಚಿದಂತೆ ಮೆಟ್ರೋ ರೈಲು ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಗೆ ಸುರಂಗ ಯಂತ್ರಗಳ ಬೇಡಿಕೆ ಹೆಚ್ಚಾಗುತ್ತಿದೆ. ಈ ಬೇಡಿಕೆಯನ್ನು ಸ್ಥಳೀಯವಾಗಿ ಪೂರೈಸುವ ಮೂಲಕ ಬಿಇಎಂಎಲ್ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಈಗ ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ಜಾಲವಾಗಿರುವ ಭಾರತದ ಮೆಟ್ರೋ ಜಾಲವು 23 ನಗರಗಳಲ್ಲಿ 1,013 ಕಿ.ಮೀ.ಗೂ ಹೆಚ್ಚು ವ್ಯಾಪಿಸಿದೆ. 2025-26ರಲ್ಲಿ ಮೆಟ್ರೋ ಯೋಜನೆಗಳಿಗೆ ಕೇಂದ್ರದ ಬಜೆಟ್ 34,807 ಕೋಟಿ ರೂ.ಗಳಿಗೆ ಏರಿದೆ, ಇದು 2013-14ಕ್ಕೆ ಹೋಲಿಸಿದರೆ ಆರು ಪಟ್ಟು ಹೆಚ್ಚಾಗಿದೆ.
ಅಲ್ಲದೆ, ರಕ್ಷಣಾ ಉತ್ಪನ್ನಗಳು ಮತ್ತು ರೈಲುಗಳಿಗೆ ಕೋಚ್‌ಗಳನ್ನು ತಯಾರಿಸುವಲ್ಲಿ ಬಿಇಎಂಎಲ್ ಈಗಾಗಲೇ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಸುಮಾರು 1,750 ಕ್ಕೂ ಹೆಚ್ಚು ಮೆಟ್ರೋ ಕೋಚ್‌ಗಳನ್ನು ಪೂರೈಸಿದೆ. ಈ ಹೊಸ ಉತ್ಪಾದನಾ ಘಟಕದಿಂದ ಮತ್ತಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ನಿರೀಕ್ಷಿಸಲಾಗಿದೆ.






















