ಬೆಂಗಳೂರು, ಆ.19 www.bengaluruwire.com : ಅರಣ್ಯ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ಸಮಾಜದ ವತಿಯಿಂದ ಇಂದು (ಆಗಸ್ಟ್ 19) ಸ್ವಾತಂತ್ರ್ಯ ಉದ್ಯಾನವನದಲ್ಲಿ ವನ್ಯಜೀವಿ ಸಂರಕ್ಷಣೆ ಹಾಗೂ ಉರಗ ರಕ್ಷಕ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಇದೇ ವೇಳೆ ಒತ್ತಾಯಿಸಿದರು.
ವನ್ಯಜೀವಿ ಸಂರಕ್ಷಕರು, ಮುಖ್ಯವಾಗಿ ಹಾವುಗಳಿಗೆ ಸಂಬಂಧಿಸಿದಂತೆ ಹಾಗೂ ಅರಣ್ಯ ಪ್ರದೇಶಗಳಲ್ಲಿ ಸಂರಕ್ಷಣಾ ಸಂದರ್ಭದಲ್ಲಿ ಸಾವನ್ನಪ್ಪಿದಾಗ ಅವರ ಕುಟುಂಬಗಳಿಗೆ ಅಥವಾ ಗಾಯಗೊಂಡಾಗ ಅವರಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಹಾವುಗಳಿಂದ ಕಚ್ಚಲ್ಪಟ್ಟಾಗಲೂ ತಕ್ಷಣ ವೈದ್ಯಕೀಯ ನೆರವು ಮತ್ತು ಸೂಕ್ತ ಚಿಕಿತ್ಸೆ ನೀಡುವಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಅವರು ಆರೋಪಿಸಿದರು.
ಅಷ್ಟೇ ಅಲ್ಲದೆ, ವನ್ಯಜೀವಿ ಸಂರಕ್ಷಕರಿಗೆ ಮಾಸಿಕ ಗೌರವ ಧನ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಕಾರ್ಯದಲ್ಲಿ ತೊಡಗಿರುವವರಿಗೆ ಸೂಕ್ತ ಜೀವಿ ವಿಮೆ ಮತ್ತು ಆರೋಗ್ಯ ವಿಮೆಯನ್ನು ಒದಗಿಸುವುದು, ವನ್ಯಜೀವಿ ಸಂರಕ್ಷಕರನ್ನು ಕಾನೂನು ಬದ್ಧವಾಗಿ ಲೈಸೆನ್ಸ್ ಹಾಗೂ ಗುರುತಿನ ಚೀಟಿ ನೀಡುವುದು. ವನ್ಯಜೀವಿ ಸಂರಕ್ಷಕರಿಗೆ ಸರ್ಕಾರದ ವತಿಯಿಂದ ತುರ್ತು ನಿಧಿ ಸ್ಥಾಪಿಸಬೇಕು ಹಾಗೂ ಬ್ಯಾಂಕ್ ಸಾಲಗಳ ವಿಷಯದಲ್ಲಿ ಸಂಪೂರ್ಣ ವಿನಾಯಿತಿ ನೀಡಬೇಕು ಎಂದು ಸಂಘಟನೆಯ ಬೆಂಗಳೂರು ನಗರ ಅಧ್ಯಕ್ಷ ಕೆ.ಎಸ್.ದೇವರಾಜ್ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ತಮ್ಮ ಜೀವವನ್ನು ಪಣಕ್ಕಿಟ್ಟು ವನ್ಯಜೀವಿಗಳನ್ನು ರಕ್ಷಿಸುವ ಕಾರ್ಯಕರ್ತರನ್ನು ಸರ್ಕಾರ ಈತನಕ ಗುರುತಿಸದೇ ಇರುವುದು ತೀವ್ರ ಬೇಸರ ತಂದಿದೆ ಎಂದು ಪ್ರತಿಭಟನಾಕಾರರು ಹೇಳಿದರು.























