ಬೆಂಗಳೂರು, ಆ.19 www.bengaluruwire.com : ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಭಾರತ ಮಹತ್ವದ ಹೆಜ್ಜೆ ಇಟ್ಟಿದ್ದು, ತೈವಾನ್‌ನ ಪ್ರಮುಖ ಎಲೆಕ್ಟ್ರಾನಿಕ್ಸ್ ತಯಾರಿಕಾ ಕಂಪನಿ ಫಾಕ್ಸ್‌ಕಾನ್ ಬೆಂಗಳೂರಿನ ದೇವನಹಳ್ಳಿಯಲ್ಲಿ ತನ್ನ ಹೊಸ ಘಟಕದಲ್ಲಿ ಐಫೋನ್ 17 ಉತ್ಪಾದನೆಯನ್ನು ಅಧಿಕೃತವಾಗಿ ಆರಂಭಿಸಿದೆ. ಇದು ಭಾರತವನ್ನು ಭವಿಷ್ಯದ “ಜಾಗತಿಕ ಐಫೋನ್ ರಾಜಧಾನಿ”ಯಾಗಿ ರೂಪಿಸುವ ಕನಸಿಗೆ ಮತ್ತಷ್ಟು ಬಲ ತುಂಬಿದೆ.
300 ಎಕರೆಗಳ ವಿಶಾಲ ಪ್ರದೇಶದಲ್ಲಿ ₹25,000 ಕೋಟಿ (ಸುಮಾರು $2.8 ಶತಕೋಟಿ) ಹೂಡಿಕೆಯೊಂದಿಗೆ ಸ್ಥಾಪಿಸಲಾದ ಈ ಘಟಕವು ಚೀನಾದ ಹೊರಗೆ ಫಾಕ್ಸ್‌ಕಾನ್‌ನ ಎರಡನೇ ಅತಿ ದೊಡ್ಡ ಉತ್ಪಾದನಾ ಘಟಕವಾಗಿದೆ. ಈ ಬೆಳವಣಿಗೆಯನ್ನು ಕರ್ನಾಟಕದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪಾಟೀಲ್ ಅವರು, ಈ ಘಟಕ ಕೇವಲ ಐಫೋನ್‌ಗಳ ಜೋಡಣೆಗೆ ಸೀಮಿತವಾಗಿಲ್ಲ; ಇದು ಕರ್ನಾಟಕವನ್ನು ಜಾಗತಿಕ ಎಲೆಕ್ಟ್ರಾನಿಕ್ಸ್ ತಯಾರಿಕಾ ಕೇಂದ್ರವಾಗಿ ಸ್ಥಾಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಇದರಿಂದ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿದ್ದು, ಪೂರೈಕೆ ಸರಪಳಿ ಬಲಗೊಳ್ಳಲಿದೆ ಮತ್ತು ಭಾರತದ ರಫ್ತು ಮಹತ್ವಾಕಾಂಕ್ಷೆಗಳಿಗೆ ಉತ್ತೇಜನ ದೊರೆಯಲಿದೆ ಎಂದರು.
ಫಾಕ್ಸ್‌ಕಾನ್‌ನ ಈ ಹೊಸ ಘಟಕವು ಚೆನ್ನೈನಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅದರ ಘಟಕಕ್ಕೆ ಪೂರಕವಾಗಿದ್ದು, ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಜಾಗತಿಕ ಬೇಡಿಕೆಗಳನ್ನು ಪೂರೈಸಲು ಆಪಲ್‌ಗೆ ನೆರವಾಗಲಿದೆ.

ಪ್ರಾರಂಭದಲ್ಲಿ ಕಾರ್ಮಿಕರ ಕೊರತೆ ಸೇರಿದಂತೆ ಕೆಲವು ಸವಾಲುಗಳಿದ್ದರೂ, ಅವುಗಳನ್ನು ಯಶಸ್ವಿಯಾಗಿ ನಿವಾರಿಸಿ, ಫಾಕ್ಸ್‌ಕಾನ್ ಈಗ ಬೆಂಗಳೂರನ್ನು ಜಾಗತಿಕ ಐಫೋನ್ ನಕ್ಷೆಯಲ್ಲಿ ಸೇರಿಸಲು ಸಿದ್ಧವಾಗಿದೆ. ಆಪಲ್ ಸಿಇಒ ಟಿಮ್ ಕುಕ್ ಅವರ ಪ್ರಕಾರ, ಜೂನ್ 2025 ರ ಹೊತ್ತಿಗೆ ಅಮೆರಿಕದಲ್ಲಿ ಮಾರಾಟವಾದ ಐಫೋನ್‌ಗಳ ಗಣನೀಯ ಪಾಲು ಭಾರತದಲ್ಲಿ ತಯಾರಾಗಿವೆ.
ಉದ್ಯೋಗ ಸೃಷ್ಟಿಗೆ ಆದ್ಯತೆ :
ದೇವನಹಳ್ಳಿ ಘಟಕದಲ್ಲಿ ಸುಮಾರು 30,000 ಕಾರ್ಮಿಕರಿಗೆ ವಸತಿ ವ್ಯವಸ್ಥೆ ಒದಗಿಸುವ ಬೃಹತ್ ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದೆ. ಇದು ಭಾರತದಲ್ಲಿಯೇ ಈ ರೀತಿಯ ಅತಿದೊಡ್ಡ ಕಾರ್ಮಿಕ ವಸತಿಗೃಹವಾಗಿದೆ. ಇಲ್ಲಿನ ಉದ್ಯೋಗಿಗಳಲ್ಲಿ ಶೇ. 50 ರಿಂದ 80 ರಷ್ಟು ಮಹಿಳಾ ಕಾರ್ಮಿಕರು ಇರಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಪ್ರಾರಂಭಿಕ ಹಂತದಲ್ಲಿ, ಡಿಸೆಂಬರ್ 2025 ರ ವೇಳೆಗೆ ಸುಮಾರು 1 ಲಕ್ಷ ಐಫೋನ್‌ಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ. ಮುಂದಿನ ಎರಡನೇ ಹಂತದಲ್ಲಿ ವಾರ್ಷಿಕವಾಗಿ ಹೆಚ್ಚುವರಿ 5 ಮಿಲಿಯನ್ ಐಫೋನ್‌ಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಫಾಕ್ಸ್‌ಕಾನ್ ಯೋಜನೆ ರೂಪಿಸಿದೆ.
ಐಫೋನ್ ತಯಾರಿಕಾ ಹಬ್ ಆಗುವತ್ತ ದಾಪುಗಾಲು :
ಇನ್ನು ಸಂಶೋಧನಾ ಸಂಸ್ಥೆ ಸೈಬರ್ ಮೀಡಿಯಾ ರಿಸರ್ಚ್ ಪ್ರಕಾರ, ಭಾರತದಿಂದ ಐಫೋನ್ ರಫ್ತುಗಳು (ಭಾರತದಿಂದ ವಿದೇಶಕ್ಕೆ ಕಳುಹಿಸಲಾದ ಐಫೋನ್‌ಗಳು) 22.88 ಮಿಲಿಯನ್ (2 ಕೋಟಿ 28 ಲಕ್ಷ) ಯೂನಿಟ್‌ಗಳಿಗೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ (ಜನವರಿಯಿಂದ ಜೂನ್ವರೆಗೆ), ಭಾರತದಲ್ಲಿ ಐಫೋನ್ ತಯಾರಿಕೆಯ ಸಂಖ್ಯೆ 15.05 ಮಿಲಿಯನ್ (1 ಕೋಟಿ 50 ಲಕ್ಷ) ಆಗಿತ್ತು. ಅಂದರೆ, ವಾರ್ಷಿಕ ಆಧಾರದ ಮೇಲೆ ಇದು ಶೇ.52ರಷ್ಟು ಹೆಚ್ಚಾಗಿದೆ.
ಇನ್ನು ಈ ವರ್ಷದ ಜೂನ್ವರೆಗೆ ದೇಶದಲ್ಲಿ 2.39 ಕೋಟಿ ಐಫೋನ್‌ಗಳನ್ನು ತಯಾರಿಸಲಾಗಿದೆ. ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳಲ್ಲಿ ಶೇ.78ರಷ್ಟು ಭಾರತದಲ್ಲಿ ತಯಾರಾಗುತ್ತಿವೆ. ಮಾರುಕಟ್ಟೆ ಸಂಶೋಧಕ ಕ್ಯಾನಲಿಸ್ ಪ್ರಕಾರ, 2025ರ ಜನವರಿ ಮತ್ತು ಜೂನ್ ನಡುವೆ ಭಾರತದಲ್ಲಿ 23.9 ಮಿಲಿಯನ್ (2 ಕೋಟಿ 39 ಲಕ್ಷ) ಐಫೋನ್‌ಗಳನ್ನು ತಯಾರಿಸಲಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ.53ರಷ್ಟು ಹೆಚ್ಚಾಗಿದೆ.






















