ಬೆಂಗಳೂರು, ಆ.18 www.bengaluruwire.com : ಬಗರ್ ಹುಕುಂ ಅರ್ಜಿಗಳ ವಿಲೇ ವಿಚಾರದಲ್ಲಿ ಸರ್ಕಾರ ಅಥವಾ ಅಧಿಕಾರಿಗಳು ಯಾವುದೇ ಕಾರಣಕ್ಕೂ ಕಾನೂನು ಮೀರಿ ನಡೆಯುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೋಮವಾರ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಅನರ್ಹ ಅರ್ಜಿಗಳನ್ನು ಆರಂಭಿಕ ಹಂತದಲ್ಲೇ ತಿರಸ್ಕರಿಸಲಾಗುತ್ತಿದ್ದು, ಒಂದು ವೇಳೆ ರೈತರಿಗೆ ಅನ್ಯಾಯವಾಗಿದ್ದರೆ ಗಮನಕ್ಕೆ ತಂದರೆ ಸರಿಪಡಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ, ಕೇವಲ ಅರ್ಹ ಅರ್ಜಿಗಳು ಮಾತ್ರ ಸಮಿತಿ ಮುಂದೆ ಬರುತ್ತಿದ್ದು, ವಿವಿಧ ರೀತಿಯಲ್ಲಿ ಅನರ್ಹ ಅರ್ಜಿಗಳು ಸಲ್ಲಿಕೆಯಾಗಿರುವುದನ್ನು ಸದನದ ಗಮನಕ್ಕೆ ತಂದರು.
ಶಾಸಕ ಎಂ.ಟಿ. ಕೃಷ್ಣಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಗರ್ ಹುಕುಂ ಹೆಸರಿನಲ್ಲಿ ಭೂ ಮಂಜೂರಾತಿಗಾಗಿ ಸಲ್ಲಿಕೆಯಾಗಿರುವ ಅನರ್ಹ ಅರ್ಜಿಗಳ ಸ್ವರೂಪದ ಬಗ್ಗೆ ವಿವರಿಸಿದರು. ಸಲ್ಲಿಕೆಯಾದ ಒಟ್ಟು ಅರ್ಜಿಗಳ ಪೈಕಿ, ಅರಣ್ಯ ಭೂಮಿಯ ಮಂಜೂರಾತಿಗಾಗಿ 1,00,565 ಅರ್ಜಿಗಳು, ಜಮೀನಿನ ಸ್ವಾಧೀನದಲ್ಲೇ ಇಲ್ಲದವರ ಕಡೆಯಿಂದ 44,517 ಅರ್ಜಿಗಳು ಮತ್ತು ಕೆರೆ ಒತ್ತುವರಿಗೆ ಸಂಬಂಧಿಸಿದಂತೆ 3,040 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಮಾಹಿತಿ ನೀಡಿದರು. ಈ ಎಲ್ಲಾ ಅರ್ಜಿಗಳನ್ನು ಕಾನೂನಿನ ಪ್ರಕಾರ ತಿರಸ್ಕರಿಸಲಾಗಿದೆ ಎಂದು ತಿಳಿಸಿದರು.
ಅಲ್ಲದೆ, ರಸ್ತೆ, ಗುಂಡು, ತೋಪು ಒತ್ತುವರಿ ಮಾಡಿದವರ, ನಗರಸಭೆ ವ್ಯಾಪ್ತಿಯಲ್ಲಿರುವ ಭೂಮಿಗೆ, ಮತ್ತು ಕೃಷಿಕರಲ್ಲದವರೂ ಸಹ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಸಚಿವರು ವಿವರಿಸಿದರು. “ಒಂದು ವೇಳೆ ಕಣ್ತಪ್ಪಿನಿಂದ ಒಂದೆರಡು ರೈತರಿಗೆ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸುತ್ತೇವೆ” ಎಂದು ಆಶ್ವಾಸನೆ ನೀಡಿದರು.

ಇದೇ ಸಂದರ್ಭದಲ್ಲಿ, ಭೂ ಹಾಗೂ ಗುಡ್ಡ ಕುಸಿತಗಳ ಶಾಶ್ವತ ಉಪಶಮನಕ್ಕಾಗಿ ರೂ. 500 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆಯೂ ಸಚಿವರು ಮಾಹಿತಿ ನೀಡಿದರು. ಮಡಿಕೇರಿ ಶಾಸಕ ಮಂಥರ್ ಗೌಡರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಲೆನಾಡು ಮತ್ತು ಕರಾವಳಿ ಭಾಗದ ಆರು ಜಿಲ್ಲೆಗಳಲ್ಲಿ ಹೆಚ್ಚು ಭೂಕುಸಿತ ಸಂಭವಿಸುವ ಪ್ರದೇಶಗಳನ್ನು ಗುರುತಿಸಿ, ಶಾಶ್ವತ ತಡೆಗೋಡೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು. ಈ ಕಾಮಗಾರಿಗಳಿಗಾಗಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಸಹಕಾರ ಪಡೆಯಲಾಗುವುದು ಎಂದು ತಿಳಿಸಿದರು.
ಜತೆಗೆ, ಕೊಡಗಿಗಾಗಿ ಭೂಕುಸಿತ ತಡೆಗೆ ಈಗಾಗಲೇ ರೂ. 50 ಕೋಟಿ ನೀಡಲಾಗಿದೆ. ತಾಂತ್ರಿಕ ತಂಡದ ಶಿಫಾರಸಿನ ಮೇರೆಗೆ ಇನ್ನೂ ಹೆಚ್ಚಿನ ಹಣ ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು. ಕಡಲ್ಕೊರೆತ ತಡೆಗೂ ಸಹ ರೂ. 300 ಕೋಟಿ ನೀಡಲಾಗಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.























