ಬೆಂಗಳೂರು, ಆ.09 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ಹಳದಿ ಮಾರ್ಗ ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೆ ಸಿದ್ಧವಾಗಿದ್ದು, ಇದೇ ವೇಳೆ ಬೊಮ್ಮಸಂದ್ರದಿಂದ ಆರ್.ವಿ. ರಸ್ತೆ ಮಾರ್ಗದ ನಡುವಿನ ಹೆಬ್ಬಗೋಡಿ ಮೆಟ್ರೋ ನಿಲ್ದಾಣ ‘ಬಯೋಕಾನ್ ಹೆಬ್ಬಗೋಡಿ ಮೆಟ್ರೋ ನಿಲ್ದಾಣ’ ವೂ ಪ್ರಯಾಣಿಕರ ಸೇವೆಗೆ ತೆರೆದುಕೊಳ್ಳುತ್ತಿದೆ.
ನಗರದಲ್ಲಿ ಹಳದಿ ಮಾರ್ಗದ ಉದ್ಘಾಟನೆಗೆ ಸಕಲ ಸಿದ್ಧತೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ, ಬಯೋಕಾನ್ ಫೌಂಡೇಶನ್‌ನ ವತಿಯಿಂದ ‘ಪಿಲ್ಲರ್ಸ್ ಆಫ್ ಬೆಂಗಳೂರು’ ಎಂಬ ವಿಶೇಷ ಕಾರ್ಯಕ್ರಮವನ್ನು ಮತ್ತೆ ಮೆಲುಕು ಹಾಕಿದೆ. ನಗರವನ್ನು ಮುನ್ನಡೆಸುತ್ತಿರುವ ಸಾಮಾನ್ಯ ಜನರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಬಿಎಂಟಿಸಿ ಚಾಲಕರು, ಐಟಿ ವೃತ್ತಿಪರರು, ಆಹಾರ ವಿತರಣಾ ಸಿಬ್ಬಂದಿ ಮತ್ತು ಇತರ ಪ್ರಮುಖ ವೃತ್ತಿ ಮಾಡುವವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ, ಹುಸ್ಕೂರು ಗೇಟ್‌ನಿಂದ ಹೆಬ್ಬಗೋಡಿವರೆಗಿನ 50 ಮೆಟ್ರೋ ಪಿಲ್ಲರ್‌ಗಳ ಮೇಲೆ ಅವರ ಚಿತ್ರಗಳನ್ನು ಚಿತ್ರಿಸಲಾಗಿದೆ. ಆ ಮೂಲಕ ಅವರ ದೊಡ್ಡ ಪಾತ್ರಕ್ಕೆ ಒಂದು ಸಣ್ಣ ಗೌರವ ಸಲ್ಲಿಸಲಾಗಿದೆ ಎಂದು ಬಯೋಕಾನ್ ಸಂಸ್ಥೆ ತನ್ನ ಸಾಮಾಜಿಕ ಜಾಲತಾಣ Instagram ನ ಅಧಿಕೃತ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದೆ.
ಈ ನಿಲ್ದಾಣದ ಸ್ಥಾಪನೆಯು ಮೆಟ್ರೋ ಹಾಗೂ ಬಯೋಕಾನ್ ಸಂಸ್ಥೆಯ ಜಂಟಿ ಸಹಭಾಗಿತ್ವದಲ್ಲಿ ನಡೆದಿದೆ. ಇದು ನಗರದ ಮೂಲಸೌಕರ್ಯ ಅಭಿವೃದ್ಧಿಗೆ ದೊಡ್ಡ ಹೆಜ್ಜೆಯಾಗಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.























