ಬೆಂಗಳೂರು, ಆ.06 www.bengaluruwire.com : ರಾಜ್ಯದಲ್ಲಿ ಜನೌಷಧಿ ಕೇಂದ್ರಗಳನ್ನು ಮುಚ್ಚಿಸಿಲ್ಲ, ಕೇವಲ ಸರ್ಕಾರಿ ಆಸ್ಪತ್ರೆ ಆವರಣಗಳಲ್ಲಿ ಮಾತ್ರ ಅವುಗಳ ಕಾರ್ಯನಿರ್ವಹಣೆಯನ್ನು ನಿರ್ಬಂಧಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ 1,417 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ಅಗ್ರಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.
ಜನೌಷಧಿ ಕೇಂದ್ರಗಳ ತೆರವು ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೆ.ಪಿ. ನಡ್ಡಾ ಅವರು ಪತ್ರ ಬರೆದಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ದಿನೇಶ್ ಗುಂಡೂರಾವ್ ಅವರು ಈ ನಿರ್ಧಾರದ ಹಿಂದಿನ ಉದ್ದೇಶವನ್ನು ವಿವರಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಉಚಿತವಾಗಿ ದೊರೆಯುವ ಔಷಧಿಗಳನ್ನು ನಿರಾಕರಿಸುವ ಸಾಧ್ಯತೆಗಳನ್ನು ತಪ್ಪಿಸುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧಿ ಕೇಂದ್ರಗಳು ರೋಗಿಗಳಿಗೆ ಉಚಿತವಾಗಿ ಸಿಗುವ ಔಷಧಿಗಳನ್ನು ನೀಡದೆ, ಅವುಗಳನ್ನು ಹೊರಗಿನಿಂದ ಖರೀದಿಸಲು ಪ್ರೇರೇಪಿಸುತ್ತಿವೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ, ಸರ್ಕಾರಿ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರೈಕೆಯಾಗುವ ಔಷಧಿಗಳನ್ನು ಮಾತ್ರ ಶಿಫಾರಸು ಮಾಡುವಂತೆ ನಿರ್ದೇಶನ ನೀಡಲಾಗಿದೆ. ಇದರಿಂದ ರೋಗಿಗಳು ಹೊರಗಿನಿಂದ ಔಷಧಿಗಳನ್ನು ಖರೀದಿಸುವ ವೆಚ್ಚ ಕಡಿಮೆಯಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಸಚಿವರ ಪತ್ರದಲ್ಲಿ ತಿಳಿಸಿರುವಂತೆ, ರಾಜ್ಯದ 1,417 ಜನೌಷಧಿ ಕೇಂದ್ರಗಳಲ್ಲಿ ಕೇವಲ 184 ಕೇಂದ್ರಗಳು ಮಾತ್ರ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿವೆ. ಉಳಿದ ಕೇಂದ್ರಗಳು ಹೊರಗಡೆ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಎಂದಿನಂತೆ ಅಲ್ಲಿ ಔಷಧಿಗಳನ್ನು ಖರೀದಿಸಲು ಮುಕ್ತರಾಗಿದ್ದಾರೆ.
ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಔಷಧಿಗಳನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ ಮೂಲಕ ನಿಯಮಿತವಾಗಿ ಪೂರೈಸಲಾಗುತ್ತಿದೆ. ಇದರ ಜೊತೆಗೆ, ಔಷಧಿಗಳ ಕೊರತೆ ಉಂಟಾದರೆ ಸ್ಥಳೀಯವಾಗಿ ಖರೀದಿಸಲು ಆಸ್ಪತ್ರೆಗಳಿಗೆ ಸಾಕಷ್ಟು ಅನುದಾನವನ್ನೂ ಒದಗಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ವಿವರಿಸಿದ್ದಾರೆ. ಸಾರ್ವಜನಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಗೆ ಸಿಎಂ, ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ದಿಢೀರ್ ಭೇಟಿ :

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್, ಬುಧವಾರ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ, ಗ್ಯಾಸ್ಟ್ರೋಎಂಟರಾಲಜಿ ಸಂಸ್ಥೆ (IGOT), ಅಪಘಾತ, ಆಘಾತ ಮತ್ತು ತುರ್ತು ಆರೈಕೆ ಕೇಂದ್ರ (TECC) ಮತ್ತು ವಾಣಿ ವಿಲಾಸ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಮತ್ತು ರೋಗಿಗಳ ಕುಶಲ ವಿಚಾರಿಸಿದರು. ಹಾಗೂ ಅಲ್ಲಿನ ಕ್ಯಾಂಟೀನ್ ಊಟದ ಗುಣಮಟ್ಟವನ್ನು ಪರೀಕ್ಷಿಸಿದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 120 ಹಾಸಿಗೆಗಳ ಆಸ್ಪತ್ರೆಯನ್ನು 300 ಹಾಸಿಗೆಗಳಿಗೆ ಹೆಚ್ಚಿಸುವ ಬಗ್ಗೆ ಬೇಡಿಕೆಯಿದೆ. ಈ ಕುರಿತ ಪ್ರಸ್ತಾವನೆ ಸರ್ಕಾರದ ಮುಂದಿದ್ದು ಇದನ್ನು ಪರಿಗಣಿಸಲಾಗುವುದು ಎಂದು ಸಚಿವರು ತಿಳಿಸಿದರು.






















