ಬೆಂಗಳೂರು, ಆ.06 www.bengaluruwire.com : ಬೆಂಗಳೂರು ನಗರದ ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೈಗೊಂಡಿರುವ 97 ವಿವಿಧ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ.
ಬೆಂಗಳೂರು ವೈರ್ ಗೆ ಲಭ್ಯವಾದ ದಾಖಲೆಗಳಲ್ಲಿ 2025ರ ಜುಲೈ 29ರ ವರೆಗಿನ ಮಾಹಿತಿ ಪ್ರಕಾರ, ಒಟ್ಟು 3605.7 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗಳಿಗೆ 3011.87 ಕೋಟಿ ರೂ. ಮೊತ್ತದ ಗುತ್ತಿಗೆ ನೀಡಲಾಗಿದ್ದರೂ, ಈವರೆಗೆ ಕೇವಲ 346.77 ಕೋಟಿ ರೂ. ಮಾತ್ರ ಹಣಕಾಸು ಪ್ರಗತಿ ಕಂಡಿದೆ. ಇದು ಒಟ್ಟು ಅಂದಾಜು ವೆಚ್ಚದ ಶೇ. 9.6ರಷ್ಟು ಮಾತ್ರ ಎಂದು ತಿಳಿಸಲಾಗಿದೆ.

ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದಡಿ ಕೈಗೊಂಡಿರುವ ಈ ಕಾಮಗಾರಿಗಳಲ್ಲಿ ಹೈಡೆನ್ಸಿಟಿ ಕಾರಿಡಾರ್ (High Density Corridor), ಪಾದಚಾರಿ ಮಾರ್ಗ (Non Motorized Transport), ಜಂಕ್ಷನ್ ಸುಧಾರಣೆ, ಗ್ರೇಡ್ ಸಪರೇಟರ್‌ಗಳು, ಮೇಲ್ಸೇತುವೆಗಳು, ರಸ್ತೆ ಅಗಲೀಕರಣ, ವೈಟ್ ಟಾಪಿಂಗ್ ಹಾಗೂ ಬ್ಲಾಕ್ ಟಾಪಿಂಗ್ ಪ್ರಮುಖವಾಗಿವೆ. ಇವುಗಳಲ್ಲಿ ಹಲವು ಕಾಮಗಾರಿಗಳು ಗುತ್ತಿಗೆ ನೀಡಿದ ಹಲವು ತಿಂಗಳುಗಳ ನಂತರವೂ ಆರಂಭವಾಗಿಲ್ಲ, ಇನ್ನೂ ಕೆಲವು ಭೂ ಸ್ವಾಧೀನ ಅಥವಾ ಇತರೆ ತಾಂತ್ರಿಕ ಕಾರಣಗಳಿಂದ ನಿಂತುಹೋಗಿವೆ. ಕೆಲವು ಯೋಜನೆ ಆರಂಭವಾಗಿ ಹಲವು ವರ್ಷಗಳೇ ಕಳೆದಿವೆ.
ಕಾಮಗಾರಿ ವಿಭಾಗವಾರು ಪ್ರಗತಿ ಇಲ್ಲಿದೆ:

* ಗ್ರೇಡ್ ಸಪರೇಟರ್‌ಗಳು (Grade separators): ಒಟ್ಟು 8 ಕಾಮಗಾರಿಗಳ ಪೈಕಿ ಮೂರು ಕಾಮಗಾರಿಗಳು ಸ್ಥಗಿತಗೊಂಡಿವೆ. ನಾಯಂಡಹಳ್ಳಿ ಜಂಕ್ಷನ್ ಮತ್ತು ಎಚ್‌ಎಂಟಿ ರಸ್ತೆಯ ಜಂಕ್ಷನ್ ಕಾಮಗಾರಿಗಳು ಕ್ರಮವಾಗಿ ಮೆಟ್ರೋ ಕಾಮಗಾರಿ ಮತ್ತು ಟಿಡಿಆರ್ ಸಮಸ್ಯೆಗಳಿಂದ ನಿಲ್ಲಿಸಲಾಗಿದೆ. ರಾಜರಾಜೇಶ್ವರಿ ನಗರದಲ್ಲಿನ ಸಿಗ್ನಲ್-ಫ್ರೀ ರೋಟರಿ ಕಾಮಗಾರಿ ಕೂಡ ಭೂ ಸ್ವಾಧೀನದ ಸಮಸ್ಯೆಯಿಂದ ಸ್ಥಗಿತಗೊಂಡಿದೆ.

* ರಸ್ತೆ ಅಗಲೀಕರಣ (Road Widening): 16 ಕಾಮಗಾರಿಗಳ ಪೈಕಿ ಕೆಲವು ಪೂರ್ಣಗೊಂಡಿದ್ದರೆ, ಬೇಗೂರು ರಸ್ತೆಯ ಅಗಲೀಕರಣ ಕಾಮಗಾರಿ 2020ರ ಏಪ್ರಿಲ್‌ನಲ್ಲೇ ಆರಂಭವಾಗಿದ್ದರೂ, ಪ್ರಗತಿ ಶೇ. 55ರಷ್ಟಿದೆ. ಪಾದರಾಯನಪುರ ಮತ್ತು ಕನಕಪುರ ರಸ್ತೆ ವಿಸ್ತರಣೆ ಕಾಮಗಾರಿಗಳು ಇಂದಿಗೂ ಟೆಂಡರ್ ಪ್ರಕ್ರಿಯೆಯಲ್ಲಿವೆ.
* ವೈಟ್ ಟಾಪಿಂಗ್ (White Topping): ರಾಜ್ಯ ಸರ್ಕಾರದ ಅನುದಾನದಡಿ ಕೈಗೊಂಡ ₹800 ಕೋಟಿ ಮೊತ್ತದ 8 ವೈಟ್ ಟಾಪಿಂಗ್ ಕಾಮಗಾರಿಗಳಲ್ಲಿ ಹಣಕಾಸು ಪ್ರಗತಿ ಕೇವಲ 41.90 ಕೋಟಿ ರೂ.ಗಳು. ಬಿಬಿಎಂಪಿ ಅನುದಾನದಡಿ ಕೈಗೊಂಡ 900 ಕೋಟಿ ರೂ.ಗಳ 8 ಕಾಮಗಾರಿಗಳಲ್ಲಿ ಹಣಕಾಸು ಪ್ರಗತಿ ಸೊನ್ನೆ. ಒಂದು ಕಾಮಗಾರಿಯ ಬದಲಾವಣೆಗಾಗಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ.
* ಬ್ಲಾಕ್ ಟಾಪಿಂಗ್ (Black Topping): ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ₹694 ಕೋಟಿ ಮೊತ್ತದ 26 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ, ಬಹುತೇಕ ಕಾಮಗಾರಿಗಳ ಹಣಕಾಸು ಪ್ರಗತಿ ಶೇ. 0 ರಷ್ಟಿದೆ. ಹಲವು ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿದರೂ, ಕೆಲಸ ಆರಂಭವಾಗಿಲ್ಲ.
* ಹೈಡೆನ್ಸಿಟಿ ಕಾರಿಡಾರ್‌ಗಳು (High Density Corridors): ₹96 ಕೋಟಿ ವೆಚ್ಚದ 3 ಕಾಮಗಾರಿಗಳ ಹಣಕಾಸು ಪ್ರಗತಿ ಕೂಡ ಸೊನ್ನೆಯಾಗಿದೆ.
* ಸೈಕಲ್ ಪಥ ಹಾಗೂ ಪಾದಚಾರಿ ಮಾರ್ಗಗಳು (Non Motorized Transport): ₹13 ಕೋಟಿ ವೆಚ್ಚದ 2 ಕಾಮಗಾರಿಗಳ ಹಣಕಾಸು ಪ್ರಗತಿಯೂ ಶೂನ್ಯ.
* ಕೊನೆಯ ಮೈಲು ತನಕದ ಸಂಪರ್ಕ ಕಲ್ಪಿಸುವಿಕೆ (Last Mile Connectivity) : ₹90 ಕೋಟಿ ಮೊತ್ತದ ಮೂರು ಕಾಮಗಾರಿಗಳಲ್ಲಿ ಸಾಧಿಸಿದ ಹಣಕಾಸು ಪ್ರಗತಿಯೂ ಸೊನ್ನೆಯಾಗಿದೆ.
ಒಟ್ಟಾರೆಯಾಗಿ, ಬಿಬಿಎಂಪಿ ರಸ್ತೆ ಮತ್ತು ಮೂಲಭೂತ ಸೌಕರ್ಯಗಳ ಕಾಮಗಾರಿಗಳು ಹಣಕಾಸು ಪ್ರಗತಿಯಲ್ಲಿ ಭಾರೀ ಹಿಂದುಳಿದಿವೆ. ಬಹುತೇಕ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿರುವುದು ಅಥವಾ ಸ್ಥಗಿತಗೊಂಡಿರುವುದು ಬೆಂಗಳೂರಿನ ನಾಗರಿಕರಿಗೆ, ವಿಶೇಷವಾಗಿ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೀವ್ರ ಅನನುಕೂಲ ಉಂಟುಮಾಡುತ್ತಿದೆ. ಸರ್ಕಾರದ ಹಾಗೂ ಪಾಲಿಕೆಯ ನಿರ್ಲಕ್ಷ್ಯ ಈ ಪ್ರಮುಖ ಕಾಮಗಾರಿಗಳ ಮೇಲೆ ಕರಿನೆರಳು ಬೀರಿರುವಂತಿದೆ.























