ಬೆಂಗಳೂರು, ಆ.05 www.bengaluruwire.com : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೆಂಗಳೂರಿನ ಲಾಲ್ ಬಾಗ್ ನಲ್ಲಿ 218ನೇ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ವರ್ಷದ ಪ್ರದರ್ಶನವು ವೀರ ರಾಣಿ ಕಿತ್ತೂರು ಚೆನ್ನಮ್ಮ ಮತ್ತು ಆಕೆಯ ಸೈನ್ಯಾಧಿಕಾರಿ ಸಂಗೊಳ್ಳಿ ರಾಯಣ್ಣನವರ ಹೋರಾಟಕ್ಕೆ ಗೌರವ ಸಲ್ಲಿಸಲಿದೆ. ಆಗಸ್ಟ್ 7 ರಿಂದ 18 ರವರೆಗೆ ನಡೆಯಲಿರುವ ಈ ವಿಶೇಷ ಪ್ರದರ್ಶನವು ಪ್ರೇಕ್ಷಕರಿಗೆ ಕಣ್ಮನ ಸೆಳೆಯಲಿದೆ.

218ನೇ ಫಲಪುಷ್ಪ ಪ್ರದರ್ಶನ ಕುರಿತಂತೆ ತೋಟಗಾರಿಕಾ ಇಲಾಖೆಯ ನಿರ್ದೇಶಕರಾದ ಡಾ.ರಮೇಶ್ ಹಾಗೂ ಜಂಟಿ ನಿರ್ದೇಶಕರಾದ ಜಗದೀಶ್ ಮಂಗಳವಾರ ಸುದ್ದಿಗೋಷ್ಠಿ ಕರೆದು ವೀರ ರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನವರ ವಿಷಯಾಧಾರಿತ ಸ್ವಾತಂತ್ರ್ಯೋತ್ಸವದ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಈ ಕುರಿತ ಮಾಹಿತಿ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಕಿತ್ತೂರು ಕಥೆ ಹೂಗಳ ಮೂಲಕ ಅನಾವರಣ :

ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಒಟ್ಟು 36.5 ಲಕ್ಷ ಹೂಗಳನ್ನು ಬಳಸಲಾಗುತ್ತಿದೆ. ಗಾಜಿನ ಮನೆಯಲ್ಲಿ ಸುಮಾರು 18 ಅಡಿ ಎತ್ತರ ಮತ್ತು 32 ಅಡಿ ಅಗಲದ ಕಿತ್ತೂರು ಕೋಟೆ ಮತ್ತು ರಾಣಿ ಚೆನ್ನಮ್ಮನವರ ಐಕ್ಯ ಮಂಟಪದ ಪ್ರತಿಕೃತಿಗಳನ್ನು ನಿರ್ಮಿಸಲಾಗುತ್ತಿದೆ. ಬ್ರಿಟಿಷರ ವಿರುದ್ಧದ ಚೆನ್ನಮ್ಮ ಮತ್ತು ರಾಯಣ್ಣನವರ ಹೋರಾಟದ ಕಥೆಯನ್ನು 60 ದೊಡ್ಡ ಫಲಕಗಳಲ್ಲಿ ಚಿತ್ರ ಮತ್ತು ಮಾಹಿತಿಯೊಂದಿಗೆ ಪ್ರದರ್ಶಿಸಲಾಗುವುದು. ಸುಮಾರು 10 ಲಕ್ಷ ಜನರು ಈ ಪ್ರದರ್ಶನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.


ಟಿಕೆಟ್ ದರ ಮತ್ತು ಇತರ ಸಿದ್ಧತೆಗಳು :
ಕಳೆದ ವರ್ಷದಂತೆ ಈ ವರ್ಷವೂ ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ ₹80 ಮತ್ತು ರಜಾದಿನಗಳಲ್ಲಿ ₹100 ದರ ನಿಗದಿಪಡಿಸಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ ₹30 ಶುಲ್ಕವಿದ್ದು, ಶಾಲಾ ಸಮವಸ್ತ್ರದಲ್ಲಿ ಬರುವ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ.
ವಿವಿಧ ಬಗೆಯ ಹೂಗಳ ಬಳಕೆ :

ಸುಮಾರು ₹2 ಕೋಟಿ ವೆಚ್ಚದಲ್ಲಿ ಪ್ರದರ್ಶನವನ್ನು ಸಿದ್ಧಪಡಿಸಲಾಗುತ್ತಿದ್ದು, ದೇಶದ ವಿವಿಧ ಭಾಗಗಳಿಂದ ಹೂಗಳನ್ನು ತರಿಸಲಾಗುತ್ತಿದೆ. ಆಂಥೋರಿಯಂ, ಗುಲಾಬಿ, ಜರ್ಬೇರಾ, ಆರ್ಕಿಡ್, ಸುಗಂಧ ರಾಜ ಸೇರಿದಂತೆ ವಿವಿಧ ಶೀತ ವಲಯದ ಹೂಗಳನ್ನು ಬಳಸಲಾಗುತ್ತಿದೆ. ಕರ್ನಾಟಕ, ಕೇರಳ, ತಮಿಳುನಾಡು, ಮತ್ತು ಆಂಧ್ರಪ್ರದೇಶದಿಂದ ಹೂಗಳನ್ನು ತರಿಸಲಾಗುತ್ತಿದೆ. ಸುಮಾರು 1000 ಕಾರ್ಮಿಕರು ಈ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ಈ ಬಾರಿ ಲಾಲ್ ಬಾಗ್‌ನಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಬೋನ್ಸಾಯ್ ವನ ಕೂಡಾ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಲಿದೆ.






















