ಬೆಂಗಳೂರು, ಆ.05 www.bengaluruwire.com : ರಾಜ್ಯದಲ್ಲಿ ಇದುವರೆಗೆ ತಹಶೀಲ್ದಾರ್ ಕಚೇರಿ ಮಟ್ಟದಲ್ಲಿ ಮಾತ್ರ ನಡೆಯುತ್ತಿದ್ದ ಕಂದಾಯ ದಾಖಲೆಗಳ ಸ್ಕ್ಯಾನಿಂಗ್ ಕಾರ್ಯವು ಇಂದಿನಿಂದ ಉಪವಿಭಾಗಾಧಿಕಾರಿ (AC) ಮತ್ತು ಜಿಲ್ಲಾಧಿಕಾರಿ (DC) ಕಚೇರಿಗಳಲ್ಲೂ ಆರಂಭವಾಗಿದೆ.
ಭೂ ಸುರಕ್ಷಾ ಯೋಜನೆಯಡಿ ಈ ದಾಖಲೆಗಳನ್ನು ಸ್ಕ್ಯಾನ್ ಮಾಡುವ ಕಾರ್ಯಕ್ರಮಕ್ಕೆ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಮಂಗಳವಾರ ಚಾಲನೆ ನೀಡಿದ್ದಾರೆ.

ಈ ಯೋಜನೆ ಕುರಿತು ಮಾತನಾಡಿದ ಸಚಿವರು, ಕಂದಾಯ ಇಲಾಖೆಯ ಎಲ್ಲಾ ಮೂಲ ದಾಖಲೆಗಳನ್ನು ಶಾಶ್ವತವಾಗಿ ಸಂರಕ್ಷಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು. ರಾಜ್ಯದ 246 ತಾಲೂಕುಗಳ ಪೈಕಿ 26 ತಾಲೂಕುಗಳಲ್ಲಿ ಈಗಾಗಲೇ ಎ ಮತ್ತು ಬಿ ವರ್ಗದ ದಾಖಲೆಗಳ ಸ್ಕ್ಯಾನಿಂಗ್ ಪೂರ್ಣಗೊಂಡಿದೆ. ಒಟ್ಟು 100 ಕೋಟಿ ಪುಟಗಳ ದಾಖಲೆಗಳಲ್ಲಿ ಈವರೆಗೆ 35.36 ಕೋಟಿ ಪುಟಗಳು ಸ್ಕ್ಯಾನ್ ಆಗಿದ್ದು, ಉಳಿದ 65 ಕೋಟಿ ಪುಟಗಳನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಮಧ್ಯವರ್ತಿಗಳ ಹಾವಳಿಗೆ ತಡೆ, ದಾಖಲೆಗಳ ಸಂರಕ್ಷಣೆ :

ಈ ಯೋಜನೆ ಮೂಲಕ ಕಡತಗಳು ಕಾಣೆಯಾಗುವುದನ್ನು ತಡೆಯುವುದು ಹಾಗೂ ಸಾರ್ವಜನಿಕರು ಮಧ್ಯವರ್ತಿಗಳ ಕೈಗೆ ಸಿಲುಕದಂತೆ ರಕ್ಷಿಸುವುದು ಸರ್ಕಾರದ ಗುರಿಯಾಗಿದೆ. ಜನರಿಗೆ ಅವರ ಜಮೀನಿನ ದಾಖಲೆಗಳು ಸುಲಭವಾಗಿ, ಕೈಬೆರಳ ತುದಿಯಲ್ಲೇ ಲಭ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶ ಎಂದು ಸಚಿವರು ಹೇಳಿದರು.

ಜಮೀನಿನ ಮಾಲೀಕತ್ವ ಕುರಿತಂತೆ 10 ವರ್ಷ ಮತ್ತು ಅದಕ್ಕಿಂತ ಹಳೆಯದಾದ ಎ ಮತ್ತು ಬಿ ವರ್ಗದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಂರಕ್ಷಿಸಿಡಲಾಗುತ್ತದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವವರಿಗೆ ಮೊದಲು ಆ ದಾಖಲೆಗಳನ್ನು ಸ್ಕ್ಯಾನ್ ಮಾಡಿ ವಿತರಿಸಲಾಗುವುದು ಎಂದು ತಿಳಿಸಿದರು.
ನಕಲಿ ದಾಖಲೆಗಳಿಗೆ ಇನ್ನು ಅವಕಾಶವಿಲ್ಲ :
ಹಿಂದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾವಿರಾರು ಕೋಟಿ ಮೌಲ್ಯದ ಭೂಮಿ ಕಬಳಿಕೆಯಾಗುತ್ತಿತ್ತು. ಭೂ ಸುರಕ್ಷಾ ಯೋಜನೆಯಿಂದಾಗಿ ಇನ್ನು ಮುಂದೆ ನಕಲಿ ದಾಖಲೆಗಳನ್ನು ಸೃಷ್ಟಿಸುವುದು ಸಾಧ್ಯವಾಗುವುದಿಲ್ಲ. ಸ್ಕ್ಯಾನ್ ಮಾಡುವಾಗ ಯಾವುದೇ ದಾಖಲೆ ಅನುಮಾನಾಸ್ಪದವೆಂದು ಕಂಡುಬಂದರೆ, ಅದನ್ನು ಫೋರೆನ್ಸಿಕ್ ತನಿಖೆಗೆ ಒಳಪಡಿಸಿ ಕ್ರಮ ಕೈಗೊಳ್ಳಲಾಗುವುದು. ಈ ಉದ್ದೇಶಕ್ಕಾಗಿ ಮಾನ್ಯತೆ ಪಡೆದ ಎಫ್‌ಎಸ್‌ಎಲ್‌ಗೆ ಹಣ ಮೀಸಲಿಡಲಾಗುವುದು. ಅನುಮಾನಾಸ್ಪದ ದಾಖಲೆ ಭೂಕಬಳಿಕೆಯಾದ ಪ್ರಕರಣಗಳ ಬಗ್ಗೆ ಸುಪ್ರೀಂಕೋರ್ಟ್ ತನಕವೂ ಕಾನೂನು ಹೋರಾಟ ನಡಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಎಲ್ಲಾ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಕಚೇರಿಗಳ ದಾಖಲೆಗಳ ಸ್ಕ್ಯಾನಿಂಗ್ ಕಾರ್ಯವನ್ನು ಮುಂದಿನ ಮಾರ್ಚ್ ಒಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಪ್ರಸ್ತುತ, ಬೆಂಗಳೂರಿನ ತಹಶೀಲ್ದಾರ್ ಕಚೇರಿಗಳಲ್ಲಿ ಪ್ರತಿದಿನ ಸರಾಸರಿ 9 ರಿಂದ 10 ಸಾವಿರ ಪುಟಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಮೊದಲು ಸ್ಕ್ಯಾನಿಂಗ್ ಮಾಡುವ ಪ್ರಮಾಣ ಕಡಿಮೆಯಿತ್ತು.
ದೇಶದಲ್ಲಿ ಬೇರೆ ಯಾವ ರಾಜ್ಯಗಳಲ್ಲೂ ಕರ್ನಾಟಕದಷ್ಟು ದೊಡ್ಡ ಪ್ರಮಾಣದಲ್ಲಿ (100-120 ಕೋಟಿ ಪುಟಗಳು) ಕಂದಾಯ ದಾಖಲೆಗಳನ್ನು ಸ್ಕ್ಯಾನ್ ಮಾಡಿಲ್ಲ ಎಂದು ಸಚಿವರು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ, ಕಂದಾಯ ಆಯುಕ್ತ ಸುನಿಲ್ ಕುಮಾರ್, ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.






















