ಬೆಂಗಳೂರು, ಆ.04 www.bengaluruwire.com : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಹೈಕೋರ್ಟ್ ವಿಭಾಗೀಯ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿ ನ್ಯಾಯಮೂರ್ತಿ ಕೆ.ಎಸ್.ಮುದ್ಗಲ್ ಹಾಗೂ ಎಂ.ಜಿ.ಎಸ್.ಕಮಲ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶವನ್ನು ಹೊರಡಿಸಿದೆ.
ಈ ಆದೇಶದ ಪ್ರತಿಯನ್ನು ಸಾರಿಗೆ ನೌಕರರ ಸಂಘದ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್ ಅವರಿಗೆ ನ್ಯಾಯವಾದಿ ದೀಕ್ಷಾ ಎನ್. ಅಮೃತೇಶ್ ಅವರು ಖುದ್ದು ತಲುಪಿಸಿದ್ದಾರೆ.
ಈ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಸಭಾಂಗಣದಲ್ಲಿ ಸಾರಿಗೆ ನಿಗಮಗಳ ನೌಕರರ ವಿವಿಧ ಕಾರ್ಮಿಕ ಸಂಘಟನೆಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ, ಮುಷ್ಕರವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿಗಳು ನೌಕರರ ಸಂಘಟನೆಗಳಿಗೆ ಮನವಿ ಮಾಡಿದರು.

ಮಾತುಕತೆಯ ಪ್ರಮುಖಾಂಶಗಳು:

* ಹಿಂದಿನ ಸರ್ಕಾರ 2023ರ ಮಾರ್ಚ್ 1ರಂದು ಶೇ. 15ರಷ್ಟು ಮೂಲವೇತನ ಹೆಚ್ಚಳಕ್ಕೆ ಒಪ್ಪಂದ ಮಾಡಿಕೊಂಡಿತ್ತು.
* ಶ್ರೀನಿವಾಸ ಮೂರ್ತಿ ಸಮಿತಿಯು 2022ರ ಜನವರಿ 1 ರಿಂದ 2023ರ ಫೆಬ್ರವರಿ 28ರವರೆಗೆ ಬಾಕಿ ವೇತನ ನೀಡಲು ಶಿಫಾರಸು ಮಾಡಿತ್ತು. ಸರ್ಕಾರ ಈ ಶಿಫಾರಸನ್ನು ಒಪ್ಪಿದೆ.
* ಆದರೆ, ಈಗ 38 ತಿಂಗಳ ಬಾಕಿ ವೇತನ ಕೇಳುವುದು ಸರಿಯಲ್ಲ.
* ಪ್ರಸ್ತುತ ಎಲ್ಲಾ ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಸರ್ಕಾರ ಯಾರಿಗೂ ಅನ್ಯಾಯ ಮಾಡುವುದಿಲ್ಲ.
* ಎಲ್ಲಾ ಅಹವಾಲುಗಳನ್ನು ಮಾತುಕತೆ ಮೂಲಕ ಬಗೆಹರಿಸಲು ಸರ್ಕಾರ ಸಿದ್ಧವಿದೆ.
* ಸಾರಿಗೆ ನೌಕರರ ಸಂಘದ ಚುನಾವಣೆ ನಡೆಸುವ ಕುರಿತು ಪರಿಶೀಲನೆ ನಡೆಸಲಾಗುವುದು.
ಮುಖ್ಯಮಂತ್ರಿಗಳ ಮನವಿಗೆ ಸ್ಪಂದಿಸದ ಸಂಘಟನೆಗಳು:
ಸಭೆಯ ನಂತರ ಮಾತನಾಡಿದ ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್, “24 ತಿಂಗಳ ಹಿಂಬಾಕಿ ನೀಡಲು ಸಾಧ್ಯವಿಲ್ಲ, ಕೇವಲ 14 ತಿಂಗಳ ಹಿಂಬಾಕಿ ನೀಡುತ್ತೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಮುಂದಿನ ವೇತನ ಪರಿಷ್ಕರಣೆ ಬಗ್ಗೆಯೂ ನಮಗೆ ಯಾವುದೇ ಭರವಸೆ ಸಿಕ್ಕಿಲ್ಲ. ಆದ್ದರಿಂದ ನಮ್ಮ ಮುಷ್ಕರ ನಿಗದಿಯಂತೆ ನಡೆಯಲಿದೆ” ಎಂದು ಹೇಳಿದರು. ಈ ಹೇಳಿಕೆಯ ನಂತರ, ನ್ಯಾಯವಾದಿ ದೀಕ್ಷಾ ಅಮೃತೇಶ್ ಅವರು ಹೈಕೋರ್ಟ್ ಆದೇಶವನ್ನು ಅನಂತಸುಬ್ಬರಾವ್ ಅವರಿಗೆ ಖುದ್ದಾಗಿ ತಲುಪಿಸಿದರು.
ನೌಕರರು ಮುಷ್ಕರದಲ್ಲಿ ಭಾಗವಹಿಸದಂತೆ ಕೆಎಸ್ ಆರ್ ಟಿಸಿ ಮನವಿ :
ಈ ಮಧ್ಯೆ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂಪಾಷ, ಉಚ್ಛ ನ್ಯಾಯಾಲಯವು ನಾಳೆ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ ತಡೆಯಾಜ್ಞೆ ನೀಡಿರುವುದರಿಂದ, ನ್ಯಾಯಾಲಯದ ಆದೇಶವನ್ನು ಗೌರವಿಸಬೇಕು. ಹಾಗೂ ಈಗಾಗಲೇ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ, ಸಾರ್ವಜನಿಕ ಅಗತ್ಯ ಸೇವಾ ಸಂಸ್ಥೆಯಾಗಿರುವ ಸಾರಿಗೆ ಸಂಸ್ಥೆಯ ನೌಕರರು ನಾಳಿನ ಮುಷ್ಕರದಲ್ಲಿ ಪಾಲ್ಗೊಳ್ಳಬಾರದು” ಎಂದು ಅವರು ಮನವಿ ಮಾಡಿದ್ದಾರೆ.






















