ಕೋಲಾರ, ಆ.03 www.bengaluruwire.com : ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ ಭೂಗತ ಪಾತಕಿ ರವಿ ಪೂಜಾರಿ ಸಹಚರ ಕವಿರಾಜ್ ಅಲಿಯಾಸ್ ರಾಜ್ ಅಲಿಯಾಸ್ ಪವರಾಜ್‌ನನ್ನು ಕೋಲಾರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಹಲವು ವರ್ಷಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಈತ, ದೇಶದಾದ್ಯಂತ ಸುಮಾರು 14ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
2020ರಲ್ಲಿ ನಡೆದ ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದಲ್ಲಿ ಹಣಕ್ಕಾಗಿ ಒತ್ತಾಯಿಸಿದ್ದು, ಅದರಲ್ಲಿ ಕವಿರಾಜ್ ಪ್ರಮುಖ ಆರೋಪಿಯಾಗಿದ್ದ. ಈ ಪ್ರಕರಣದ ತನಿಖೆ ನಡೆಸಿದ ಕೋಲಾರ ಸಿಇಎನ್ ಠಾಣಾ ಪೊಲೀಸರು, ಸುದೀರ್ಘ ಕಾರ್ಯಾಚರಣೆಯ ನಂತರ ಜುಲೈ 31ರಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ ಆತನನ್ನು ಬಂಧಿಸಿ, ಕೋಲಾರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಅವರ ನಿರ್ದೇಶನದ ಮೇರೆಗೆ, ಸಿಇಎನ್ ಠಾಣೆಯ ಉಪಾಧೀಕ್ಷಕ ಆರ್. ರಾಜೇಶ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡದಲ್ಲಿ ಆರಕ್ಷಕ ನಿರೀಕ್ಷಕ ಎಸ್.ಆರ್. ಜಗದೀಶ್ ಮತ್ತು ಇತರೆ ಸಿಬ್ಬಂದಿ ಇದ್ದರು.
ಆಧುನಿಕ ತಂತ್ರಜ್ಞಾನವನ್ನು ಬಳಸಿ ಆರೋಪಿಯ ಚಲನವಲನಗಳ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಿದ ಪೊಲೀಸರು, ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ತೀವ್ರ ಶೋಧ ನಡೆಸಿದ್ದರು. ಕವಿರಾಜ್ ಅಲಿಯಾಸ್ ರಾಜ್, ಭೂಗತ ಪಾತಕಿಗಳಾದ ರವಿ ಪೂಜಾರಿ ಮತ್ತು ಮುತ್ತಪ್ಪ ರೈ ಅವರ ಸಹಚರನಾಗಿದ್ದ.

ಆತನ ವಿರುದ್ಧ ಬೆಂಗಳೂರಿನ ಕಾಮಾಕ್ಷಿಪಾಳ್ಯ, ತಿಲಕ್ ನಗರ, ಕೆಂಗೇರಿ, ಆಡುಗೋಡಿ, ಸರ್ಜಾಪುರ, ಕಾಡುಗೋಡಿ, ಇಂದಿರಾನಗರ, ಬೈಯಪ್ಪನಹಳ್ಳಿ ಸೇರಿದಂತೆ ತಮಿಳುನಾಡಿನ ಥಳಿ ಪೊಲೀಸ್ ಠಾಣೆಗಳಲ್ಲೂ ಕೊಲೆ, ದರೋಡೆ, ವಂಚನೆ, ಬೆದರಿಕೆ ಹಾಗೂ ಕಳ್ಳತನದಂತಹ ಗಂಭೀರ ಪ್ರಕರಣಗಳು ದಾಖಲಾಗಿದ್ದವು. ಬಂಧಿತ ಆರೋಪಿ ಉತ್ತರಾಖಂಡ ಮತ್ತು ನೇಪಾಳ ಗಡಿ ಭಾಗದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಎಂದು ತಿಳಿದುಬಂದಿದೆ.






















