ಬೆಂಗಳೂರು, ಆ.02 www.bengaluruwire.com : ನಗರದಲ್ಲಿ ಮೊದಲ ಬಾರಿಗೆ, ನವಜೀವ ನೀಡುವ ಮಹತ್ವದ ಪ್ರಯತ್ನದಲ್ಲಿ, ನಮ್ಮ ಮೆಟ್ರೋ ದೇಣಿಗೆಯಾಗಿ ಬಂದ ಯಕೃತ್ತನ್ನು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸಲು ನೆರವಾಗಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಶುಕ್ರವಾರ ರಾತ್ರಿ ನಡೆದ ಈ ಕಾರ್ಯಾಚರಣೆ, ಸಂಚಾರ ದಟ್ಟಣೆಯನ್ನು ಮೀರಿ ಅಂಗವನ್ನು ಸಕಾಲದಲ್ಲಿ ತಲುಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು.
ವೈದೇಹಿ ಆಸ್ಪತ್ರೆಯಿಂದ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣದವರೆಗೆ ಆಂಬ್ಯುಲೆನ್ಸ್ ಮೂಲಕ ತರಲಾದ ಯಕೃತ್ತು ಮತ್ತು ವೈದ್ಯಕೀಯ ತಂಡವನ್ನು, ರಾತ್ರಿ 8:38ಕ್ಕೆ ಮೆಟ್ರೋ ಸಿಬ್ಬಂದಿ ಸ್ವಾಗತಿಸಿದರು. ಅಗತ್ಯ ದಾಖಲೆ ಕಾರ್ಯಗಳು ಮತ್ತು ಭದ್ರತಾ ಪರಿಶೀಲನೆಗಳನ್ನು ಕ್ಷಿಪ್ರವಾಗಿ ಪೂರ್ಣಗೊಳಿಸಿ, ರಾತ್ರಿ 8:42ಕ್ಕೆ ಯಕೃತ್ತನ್ನು ಹೊತ್ತ ಮೆಟ್ರೋ ರೈಲು ವೈಟ್‌ಫೀಲ್ಡ್ ನಿಲ್ದಾಣದಿಂದ ಹೊರಟಿತು. ಸರಿಯಾಗಿ 1 ಗಂಟೆ 6 ನಿಮಿಷಗಳಲ್ಲಿ, ರಾತ್ರಿ 9:48ಕ್ಕೆ ರಾಜರಾಜೇಶ್ವರಿ ನಗರ (RR ನಗರ) ಮೆಟ್ರೋ ನಿಲ್ದಾಣವನ್ನು ತಲುಪಿತು.
ನಿಲ್ದಾಣದಲ್ಲಿ ಕಾಯುತ್ತಿದ್ದ ಮತ್ತೊಂದು ತಂಡ ಯಕೃತ್ತನ್ನು ಪಡೆದು ಆಂಬ್ಯುಲೆನ್ಸ್ ಮೂಲಕ ಸ್ಪರ್ಶ ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿಸಿತು. ಇದು ಶಸ್ತ್ರಚಿಕಿತ್ಸೆಗೆ ಅಗತ್ಯವಾಗಿದ್ದ ನಿರ್ಣಾಯಕ ಸಮಯದಲ್ಲಿ ಅಂಗವನ್ನು ತಲುಪಿಸುವಲ್ಲಿ ಯಶಸ್ವಿಯಾಯಿತು. ಈ ಕಾರ್ಯಾಚರಣೆಯ ಯಶಸ್ಸಿಗೆ ಮೆಟ್ರೋ ಸಿಬ್ಬಂದಿ, ಸಹಾಯಕ ಭದ್ರತಾ ಅಧಿಕಾರಿಗಳು (ASO) ಮತ್ತು ಹೋಮ್ ಗಾರ್ಡ್‌ಗಳು ನೀಡಿದ ಸಮಯೋಚಿತ ಹಾಗೂ ಸಮರ್ಪಕ ಸಹಕಾರಕ್ಕೆ ವೈದ್ಯಕೀಯ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಹಾಗೂ ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಜಂಟಿ ಕಾರ್ಯವಿಧಾನದ ಆದೇಶದ (JPO) ಅಡಿಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಇದು ದೇಶದಲ್ಲಿ ಮೆಟ್ರೋ ಮೂಲಕ ಅಂಗಾಂಗ ಸಾಗಣೆ ನಡೆಸಿದ ಎರಡನೇ ಘಟನೆಯಾಗಿದೆ.






















