ಬೆಂಗಳೂರು, ಆ.1 www.bengaluruwire.com : ಇಂದು ನಗರದ ಕೆಲವೆಡೆ ಕಾವೇರಿ ನೀರು ಪೂರೈಕೆಯಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿದ್ದು, ಇದರಿಂದ ಅನೇಕ ಪ್ರದೇಶಗಳಲ್ಲಿ ನೀರು ಸರಬರಾಜಿಗೆ ತೊಂದರೆಯಾಗಿದೆ. ಕಾವೇರಿ 5ನೇ ಹಂತದ ಯೋಜನೆ ಮತ್ತು ಬೆಂಗಳೂರು ಪಶ್ಚಿಮ ಪ್ರದೇಶಗಳಿಗೆ ಸಂಬಂಧಿಸಿದ ಪಂಪಿಂಗ್ ಹೌಸ್ ಮತ್ತು ದೊಡ್ಡ ಗಾತ್ರದ ವಾಲ್‌ಗಳಲ್ಲಿ ತೊಂದರೆ ಉಂಟಾಗಿದೆ. ಜಲಮಂಡಳಿ (BWSSB) ಈ ಕುರಿತು ಮಾಹಿತಿ ನೀಡಿದೆ.
ನಗರಕ್ಕೆ ಕಾವೇರಿ ನೀರು ಪೂರೈಸುವ ತಾತಗುಣಿ ಜಲಚೇರಕ ಯಂತ್ರಗಾರದಲ್ಲಿ (ಪಂಪಿಂಗ್ ಹೌಸ್) ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ, ಕಾವೇರಿ 5ನೇ ಹಂತದ ಯೋಜನೆಯಡಿ ಬರುವ ಬೆಂಗಳೂರು ದಕ್ಷಿಣ ಮತ್ತು ಪೂರ್ವ ಪ್ರದೇಶಗಳಲ್ಲಿ ಇಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಈ ದೋಷವನ್ನು ಸರಿಪಡಿಸಲು ಜಲಮಂಡಳಿಯ ತಂಡ ಕಾರ್ಯ ನಿರ್ವಹಿಸುತ್ತಿದೆ ಎಂದು ಮಂಡಳಿ ಅಧ್ಯಕ್ಷರಾದ ಡಾ. ವಿ. ರಾಮಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಪಶ್ಚಿಮ ಬೆಂಗಳೂರಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ :
ಅದೇ ರೀತಿ, ಬೆಂಗಳೂರು ಪಶ್ಚಿಮ ಪ್ರದೇಶಕ್ಕೆ ನೀರು ಪೂರೈಸುವ ದೊಡ್ಡ ಗಾತ್ರದ ವಾಲ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ವಾಲ್ ದುರಸ್ತಿಪಡಿಸುವುದು ತುರ್ತು ಆಗಿರುವುದರಿಂದ, ಇಂದು ಬೆಳಿಗ್ಗೆ 6 ಗಂಟೆಯಿಂದಲೇ ದುರಸ್ತಿ ಕಾರ್ಯ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ, ಪಶ್ಚಿಮ ಬೆಂಗಳೂರಿನ ಕೆಲ ಭಾಗಗಳಲ್ಲಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ. ನೀರು ವ್ಯತ್ಯಯದಿಂದಾಗಿ ಸಾರ್ವಜನಿಕರಿಗೆ ಆಗಿರುವ ತೊಂದರೆಗೆ ಜಲಮಂಡಳಿ ವಿಷಾದ ವ್ಯಕ್ತಪಡಿಸಿದೆ.
























