ಬೆಂಗಳೂರು, ಜು.25 www.bengaluruwire.com : ರಾಜಧಾನಿ ಬೆಂಗಳೂರು ಮತ್ತೊಮ್ಮೆ ಕುಂದಾಪ್ರ ಕನ್ನಡದ ಸೊಬಗನ್ನು ಸವಿಯಲು ಸಜ್ಜಾಗಿದೆ. ‘ಕುಂದಾಪ್ರ ಕನ್ನಡ ಪ್ರತಿಷ್ಠಾನ’ ಆಯೋಜಿಸಿರುವ ಆರನೇ ‘ಕುಂದಾಪ್ರ ಕನ್ನಡ ಹಬ್ಬ-2025’ ಜುಲೈ 26 ಮತ್ತು 27ರಂದು ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್ ಬಳಿಯ ನಂದಿ ಲಿಂಕ್ ಗ್ರೌಂಡ್‌ನಲ್ಲಿ ನಡೆಯಲಿದೆ.
ಪ್ರತಿಷ್ಠಾನದ ಅಧ್ಯಕ್ಷ ಡಾ. ದೀಪಕ್ ಶೆಟ್ಟಿ ಬಾರ್ಕೂರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಶನಿವಾರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ, ದೀರ್ಘಕಾಲದ ಬೇಡಿಕೆಯಾಗಿದ್ದ ಕುಂದಾಪ್ರ ಕನ್ನಡ ಅಧ್ಯಯನ ಪೀಠವನ್ನು ಸಿಎಂ, ಸಭಾಪತಿ ಯು.ಟಿ. ಖಾದರ್, ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಈಗಾಗಲೇ ಈ ಪೀಠ ಸ್ಥಾಪನೆಯಾಗಿ ಅನುದಾನವೂ ಬಿಡುಗಡೆಯಾಗಿದೆ.
ವಿಶೇಷ ಸನ್ಮಾನ, ಉಚಿತ ಪ್ರವೇಶ :
ಈ ಬಾರಿ ಮಣಿಪಾಲ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಡಾ. ಎಚ್. ಸುದರ್ಶನ ಬಲ್ಲಾಳ್ ಅವರಿಗೆ ಶನಿವಾರ ಸಿಎಂ ಸಮ್ಮುಖದಲ್ಲಿ ‘ಊರ ಗೌರವ’ ಪುರಸ್ಕಾರ ನೀಡಿ ಗೌರವಿಸಲಾಗುವುದು. ಭಾನುವಾರ, ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಇದೇ ಪುರಸ್ಕಾರವನ್ನು ನೀಡಲಾಗುವುದು.

ನಟರಾದ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಶೈನ್ ಶೆಟ್ಟಿ, ಸಂಗೀತ ನಿರ್ದೇಶಕ ರವಿ ಬಸ್ರೂರು, ನಟಿ ರಕ್ಷಿತಾ ಪ್ರೇಮ್ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಎರಡು ದಿನಗಳ ಸಮಾರಂಭಕ್ಕೆ ಪ್ರವೇಶ ಉಚಿತವಾಗಿದ್ದು, ಸಮಸ್ತ ಕನ್ನಡಿಗರಿಗೂ ಮುಕ್ತ ಆಹ್ವಾನವಿದೆ.
ಕಲೆ, ತಿಂಡಿ-ತಿನಿಸು, ಸಂಸ್ಕೃತಿಯ ಅನಾವರಣ :
400ಕ್ಕೂ ಹೆಚ್ಚು ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಟ್ಟಣಿಗೆ ಆಟ ಎಂಬ ವಿಶೇಷ ಯಕ್ಷಗಾನ ಪ್ರದರ್ಶನ, ಕುಂದಾಪುರದ ಅಪರೂಪದ ಖಾದ್ಯಗಳ ಆಹಾರ ಮೇಳ ಮತ್ತು ವಿಶೇಷ ವಸ್ತುಗಳ ‘ಕುಂದಾಪುರ ಸಂತೆ’ ಪ್ರಮುಖ ಆಕರ್ಷಣೆಗಳಾಗಿವೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ರಾಘವೇಂದ್ರ ಕಾಂಚನ್ ತಿಳಿಸಿದರು.
ಆಟಿ ಅಮಾವಾಸ್ಯೆ, ಅಂದರೆ ಜುಲೈ 24ರ ‘ವಿಶ್ವ ಕುಂದಾಪ್ರ ಕನ್ನಡ ದಿನ’ವನ್ನು ಹಬ್ಬದ ರೂಪದಲ್ಲಿ ಜುಲೈ 26-27ರಂದು ಆಚರಿಸಲಾಗುತ್ತಿದೆ. ಇದು ಕರಾವಳಿ ಸಂಸ್ಕೃತಿಯನ್ನು ಬೆಂಗಳೂರಿಗೆ ಪರಿಚಯಿಸುವ ಸುಂದರ ವೇದಿಕೆಯಾಗಿದೆ.























