ಬೆಂಗಳೂರು, ಜು.22 www.bengaluruwire.com : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಕುಸುಮ್-ಬಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದರು.
ಈ ಯೋಜನೆಯಡಿ ಸೌರ ಕೃಷಿ ಪಂಪ್‌ಸೆಟ್‌ಗಳ ಅಳವಡಿಕೆಗೆ ಕೇಂದ್ರ ಸರ್ಕಾರ ಶೇ.30, ರಾಜ್ಯ ಸರ್ಕಾರ ಶೇ.50ರಷ್ಟು ಸಬ್ಸಿಡಿ ನೀಡುತ್ತಿದ್ದು, ಫಲಾನುಭವಿಗಳು ಶೇ.20ರಷ್ಟು ಭರಿಸಬೇಕು.
ಈಗಾಗಲೇ 40 ಸಾವಿರ ಪಂಪ್‌ಸೆಟ್‌ಗಳಿಗೆ ಅನುಮೋದನೆ ನೀಡಲಾಗಿದ್ದು, ಅವುಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಹೆಚ್ಚುವರಿಯಾಗಿ 25 ಸಾವಿರ ರೈತರು ಅರ್ಜಿ ಸಲ್ಲಿಸಿದ್ದು, ರಾಜ್ಯ ಸರ್ಕಾರ 752 ಕೋಟಿ ರೂ. ವೆಚ್ಚ ಮಾಡಲಿದೆ. 4.5 ಲಕ್ಷ ಅನಧಿಕೃತ ಐಪಿ ಸೆಟ್‌ಗಳ ಪೈಕಿ 2 ಲಕ್ಷ ಅಧಿಕೃತಗೊಳಿಸಲಾಗಿದ್ದು, ಉಳಿದವುಗಳನ್ನು ಕುಸುಮ್-ಬಿ ಯೋಜನೆಯಡಿ ತರುವ ಬಗ್ಗೆ ಚರ್ಚಿಸಲಾಯಿತು. ರೈತರಿಗೆ ಸ್ವಯಂ ವಿದ್ಯುತ್ ಮೂಲಸೌಕರ್ಯ ಕಲ್ಪಿಸಲು ಇಲಾಖೆ ಟ್ರಾನ್ಸ್‌ಫಾರ್ಮರ್‌ಗಳನ್ನು ಒದಗಿಸಲಿದೆ.
ಕೆಪಿಸಿಎಲ್ 56ನೇ ಸಂಸ್ಥಾಪನಾ ದಿನ ಜುಲೈ 23ಕ್ಕೆ :

ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ತನ್ನ 56ನೇ ಸಂಸ್ಥಾಪನಾ ದಿನವನ್ನು ಬುಧವಾರ (ಜುಲೈ 23) ಆಯೋಜಿಸಿದೆ. ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ಇಂಧನ ಸಚಿವ ಕೆ.ಜೆ.ಜಾರ್ಜ್, ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸುವರು. ಈ ಸಂದರ್ಭದಲ್ಲಿ ನಿಗಮದಲ್ಲಿ 25 ವರ್ಷ ಸೇವೆ ಸಲ್ಲಿಸಿದ ಸಿಬ್ಬಂದಿ ಹಾಗೂ ನಿವೃತ್ತ ಸಿಬ್ಬಂದಿಯನ್ನು ಸನ್ಮಾನಿಸಲಾಗುವುದು. ಅಲ್ಲದೆ, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಿಬ್ಬಂದಿಯ ಮಕ್ಕಳಿಗೆ ಚಿನ್ನದ ನಾಣ್ಯಗಳೊಂದಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.






















