ಬೆಂಗಳೂರು, ಜು.16 www.bengaluruwire.com : ರಾಜ್ಯದ ಸಣ್ಣ ನಿವೇಶನ ಮಾಲೀಕರಿಗೆ ಬಹುದಿನಗಳ ಬೇಡಿಕೆಯಾಗಿದ್ದ ಸ್ವಾಧೀನಾನುಭವ ಪ್ರಮಾಣ ಪತ್ರ (Occupancy Certificate – OC) ಪಡೆಯುವ ಪ್ರಕ್ರಿಯೆಗೆ ವಿನಾಯಿತಿ ನೀಡಲು ನಗರಾಭಿವೃದ್ಧಿ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.
1200 ಚದರ ಅಡಿ ವಿಸ್ತೀರ್ಣದ ನಿವೇಶನಗಳಲ್ಲಿ ನಿರ್ಮಿಸಲಾಗುವ ಮೂರು ಅಂತಸ್ತಿನ ಕಟ್ಟಡಗಳಿಗೆ (ನೆಲ ಅಂತಸ್ತು + ಎರಡು ಅಂತಸ್ತು ಅಥವಾ ಸ್ಟಿಲ್ಟ್ಸ್ + ಮೂರು ಅಂತಸ್ತು) ಕಾಯ್ದೆ ತಿದ್ದುಪಡಿಯಾದ ಬಳಿಕ ಒಸಿ ಪಡೆಯುವುದರಿಂದ ವಿನಾಯಿತಿ ಸಿಗಲಿದೆ.
ಕಾಯ್ದೆಗಳ ತಿದ್ದುಪಡಿಗೆ ಪ್ರಸ್ತಾವ :
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ಜು.11ರಂದು ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ (GBA)-2024, ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976 (KMC ಕಾಯ್ದೆ), ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾದರಿ ಕಟ್ಟಡ ಬೈ-ಲಾಗಳಿಗೆ ತಿದ್ದುಪಡಿ ತರಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ.

ಎಲ್ಲ ಕಾಯ್ದೆಗಳಲ್ಲೂ ಸಮಾನ ಅವಕಾಶಕ್ಕೆ ಒತ್ತು :

ಪ್ರಸ್ತುತ, ಜಿಬಿಎ-2024 ಕಾಯ್ದೆಯ ಸೆಕ್ಷನ್ 241(7) ಅಡಿಯಲ್ಲಿ ಒಸಿ ಗೆ ವಿನಾಯಿತಿ ನೀಡಲು ಸರ್ಕಾರಕ್ಕೆ ಅಧಿಸೂಚನೆ ಹೊರಡಿಸುವ ಅಧಿಕಾರವಿದೆ. ಆದರೆ, ಬಿಬಿಎಂಪಿ ಕಾಯ್ದೆ-2020, ಕೆಎಂಸಿ-1976 ಕಾಯ್ದೆ ಮತ್ತು ಕರ್ನಾಟಕ ಪುರಸಭೆ ಕಾಯ್ದೆ 1964 ರಲ್ಲಿ ಈ ಅವಕಾಶ ಇರಲಿಲ್ಲ.
ಈ ಬಗ್ಗೆ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಉಪಮುಖ್ಯಮಂತ್ರಿ, ಸಂಸದೀಯ ವ್ಯವಹಾರಗಳ ಸಚಿವರು, ಆಹಾರ, ಕೈಗಾರಿಕೆ, ಇಂಧನ, ಕಂದಾಯ, ನಗರಾಭಿವೃದ್ಧಿ, ಪೌರಾಡಳಿತ ಸಚಿವರೊಂದಿಗೆ ನಡೆದ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು. ಎಲ್ಲ ಕಾಯ್ದೆಗಳಲ್ಲೂ ಒಸಿ ಗೆ ಸಮಾನಾಂತರ ವಿನಾಯಿತಿ ಅವಕಾಶಗಳು ಇರಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.
ಇದೇ ಕಾರಣಕ್ಕೆ, ನಿಯಮಗಳನ್ನು ರೂಪಿಸಿ, ಅಸ್ತಿತ್ವದಲ್ಲಿರುವ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಒಸಿ ವಿನಾಯಿತಿಯನ್ನು ಜಾರಿಗೆ ತರಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.
ಈ ನಿರ್ಧಾರವು ಸಣ್ಣ ಮತ್ತು ಮಧ್ಯಮ ಗಾತ್ರದ ನಿವೇಶನಗಳಲ್ಲಿ ಮನೆ ಕಟ್ಟುವವರಿಗೆ ದೊಡ್ಡ ನೆಮ್ಮದಿ ತರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಹೊಸ ನಿಯಮ ಜಾರಿಗೆ ಬಂದ ನಂತರ, ಬೆಂಗಳೂರು ಸೇರಿದಂತೆ ರಾಜ್ಯದೆಲ್ಲಡೆ ತಮ್ಮ ಕನಸಿನ ಮನೆ ಕಟ್ಟಿಕೊಳ್ಳಲು ಯೋಜಿಸುತ್ತಿರುವವರಿಗೆ ಪ್ರಕ್ರಿಯೆ ಮತ್ತಷ್ಟು ಸರಳವಾಗಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಪಾಲಿಕೆ ರಚಿಸಿ ಶೀಘ್ರ ಚುನಾವಣೆಗೆ ಹೋಗಲು ನಿರ್ಧರಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಗ್ಯಾರಂಟಿ ಯೋಜನೆ ಹಾಗೂ ಒಸಿ ವಿನಾಯಿತಿ ನಿರ್ಧಾರ ಲಾಭದಾಯಕವಾಗಲಿದೆ ಎಂಬ ಲೆಕ್ಕಾಚಾರ ಹೊಂದಿದೆ.
ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ, ಬೆಸ್ಕಾಂ, ಪೌರಾಡಳಿತ, ಇಂಧನ, ಪಂಚಾಯತ್ ರಾಜ್ ಆಯುಕ್ತಾಲಯದ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.






















