ಬೆಂಗಳೂರು, ಜು.16 www.bengaluruwire.com : ವಾಣಿಜ್ಯ ತೆರಿಗೆ ಇಲಾಖೆಯ ಏಕಾಏಕಿ ನೋಟಿಸ್‌ಗಳಿಂದ ಕೆರಳಿದ ಸಣ್ಣ ಉದ್ದಿಮೆದಾರರು ರಾಜ್ಯಾದ್ಯಂತ ಜು.23 ಹಾಗೂ 24ರಂದು ಬಂದ್ ಆಚರಿಸಲು ಸಜ್ಜಾಗಿದ್ದಾರೆ.
ವಾರ್ಷಿಕ ₹40 ಲಕ್ಷ ವಹಿವಾಟು ನಡೆಸುವ ಸಣ್ಣ ವ್ಯಾಪಾರಿಗಳಿಗೆ ಯಾವುದೇ ಮುನ್ಸೂಚನೆಯಿಲ್ಲದೆ ಭಾರಿ ಮೊತ್ತದ ತೆರಿಗೆ ಪಾವತಿಗೆ ನೋಟಿಸ್ ಜಾರಿ ಮಾಡಿರುವ ವಾಣಿಜ್ಯ ತೆರಿಗೆ ಇಲಾಖೆಯ ಕ್ರಮ ವಿರೋಧಿಸಿ, ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಜುಲೈ 23 ಮತ್ತು 24ರಂದು ಎರಡು ದಿನಗಳ ಬಂದ್‌ಗೆ ಕರೆ ನೀಡಿದೆ. ಈ ಬಂದ್ ಸಮಯದಲ್ಲಿ ಹಾಲು, ಬೇಕರಿ ಉತ್ಪನ್ನಗಳು, ಬೀಡಿ, ಸಿಗರೇಟ್ ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಮಂಗಳವಾರ ಬೆಂಗಳೂರಿನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಮಾತನಾಡಿ, “ಜುಲೈ 23 ಮತ್ತು 24ರಂದು ಕೇಂದ್ರ ಸರ್ಕಾರದ ವಿರುದ್ಧ ಇಡೀ ರಾಜ್ಯದಲ್ಲಿ ದೊಡ್ಡ ಮಟ್ಟದ ಹೋರಾಟ ಕೈಗೊಳ್ಳಲಾಗುವುದು. ಜುಲೈ 25ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಗುವುದು” ಎಂದು ತಿಳಿಸಿದರು.
ಚಾಲಕರ ಸಂಘದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ಜಿ.ಎಸ್.ಟಿ ಮಂಡಳಿ ಅಧ್ಯಕ್ಷರೂ ಆಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡಲೇ ಮಧ್ಯಪ್ರವೇಶಿಸಿ ನೋಟಿಸ್ ಹಿಂಪಡೆಯಬೇಕು. ಜಿ.ಎಸ್.ಟಿ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ತಕ್ಷಣವೇ ಸಣ್ಣ ಉದ್ದಿಮದಾರರ ಪರವಾದ ತೀರ್ಮಾನ ತೆಗೆದುಕೊಳ್ಳಬೇಕು. ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್ ಉದ್ದಿಮೆದಾರರ ಪರವಾಗಿರಬೇಕು. ನಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ಕ್ರಮ ಕೈಗೊಂಡರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದರು.

ಸಣ್ಣ ವ್ಯಾಪಾರಿಗಳಿಗೆ ಸಾವಿರಾರು, ಲಕ್ಷಾಂತರ ರೂಪಾಯಿ ಮೌಲ್ಯದ ಅಂಗಡಿಗಳಿಗೆ ಭಾರಿ ಮೊತ್ತದ ತೆರಿಗೆ ಪಾವತಿಗೆ ನೋಟಿಸ್ ನೀಡಿರುವುದಕ್ಕೆ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಯಾವುದೇ ಮುನ್ಸೂಚನೆ ನೀಡದೆ ತೆರಿಗೆ ನೋಟಿಸ್ ನೀಡಿರುವ ಕ್ರಮ ಸರಿಯಲ್ಲ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಕನ್ನಡ ಒಕ್ಕೂಟದ ಅಧ್ಯಕ್ಷ ನಟರಾಜ್ ಬೊಮ್ಮಸಂದ್ರ, ತೆರಿಗೆ ಮಾಹಿತಿದಾರ ಸುಬ್ರಹ್ಮಣ್ಯ, ಗೋವಿಂದ ಬಾಬು ಪೂಜಾರಿ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು. ಈ ಬಂದ್ ರಾಜ್ಯದ ಆರ್ಥಿಕ ಚಟುವಟಿಕೆಗಳ ಮೇಲೆ ಗಣನೀಯ ಪರಿಣಾಮ ಬೀರುವ ಸಾಧ್ಯತೆಯಿದೆ.






















